ವಕೀಲರ ಬಗ್ಗೆ ಅಪಾರ ಗೌರವವಿದೆ, ಕಾಂಗ್ರೆಸ್ಸಿಗರ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಪ್ರತಾಪ್ ಸಿಂಹ ಸ್ಪಷ್ಟನೆ
ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ವಕೀಲರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Published: 08th June 2022 10:21 AM | Last Updated: 08th June 2022 01:05 PM | A+A A-

ಪ್ರತಾಪ್ ಸಿಂಹ
ಮೈಸೂರು: ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ವಕೀಲರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಸರ್ಕಾರವನ್ನ ಸಿದ್ದರಾಮಯ್ಯ ಟೀಕಿಸಿದ್ದರು. ಇಲ್ಲಸಲ್ಲದ ಆರೋಪ ಮಾಡಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸಿದ್ದೇನೆ. ಆದರೆ ವಕೀಲ ವೃತ್ತಿ ಬಗ್ಗೆ ನಾನು ಹಗುರವಾಗಿ ಮಾತನಾಡಿರುವುದಿಲ್ಲ. ವಕೀಲರಿಗೆ ಅಪಮಾನ ಮಾಡಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಾನು ವಕೀಲರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದೇನೆ ಎಂದು ಸುದೀರ್ಘ ಪತ್ರದಲ್ಲಿ ತಿಳಿಸಿರುವ ಪ್ರತಾಪ್ ಸಿಂಹ, ಮೈಸೂರು ವಕೀಲರ ಸಂಘದ ಎಲ್ಲಾ ಪ್ರಸ್ತಾಪಗಳಿಗೆ ಸ್ಪಂದಿಸಿದ್ದೇನೆ. ಕಾಂಗ್ರೆಸ್ ನಾಯಕರ ಅಪಪ್ರಚಾರಕ್ಕೆ ವಕೀಲರು ಕಿವಿಗೊಡಬಾರದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಕರ್ನಾಟಕದಿಂದ 19 ಲಕ್ಷ ಕೋಟಿ ರೂ. ಹಣವನ್ನು ತೆರಿಗೆ ರೂಪದಲ್ಲಿ ಲೂಟಿ ಮಾಡಿದೆ ಅಂತ ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದ್ದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಕೆ.ಜಿ ಗೆ 32 ರೂಪಾಯಿ ಕೊಟ್ಟು ಅಕ್ಕಿಯನ್ನು ಖರೀದಿಸಿ ರಾಜ್ಯ ಸರ್ಕಾರಕ್ಕೆ 3 ರೂ.ಗೆ ನೀಡುತ್ತದೆ. ಅದರಲ್ಲಿ 2 ರೂ. ಕಡಿಮೆ ಮಾಡಿ ನಾನು 1 ರೂ. ಕೆ.ಜಿ ಗೆ ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಭರಿಸುವ 29 ರೂ. ಬಗ್ಗೆ ಎಂದೂ ಮಾತನಾಡಲಿಲ್ಲ ಎಂದು ಪತ್ರದಲ್ಲಿ ಪ್ರತಾಪ್ ಸಿಂಹ ಹೇಳಿದ್ದಾರೆ.
ಪ್ರತಿವರ್ಷ ಖರೀದಿಸುವ ಶಸ್ತ್ರಾಸ್ತ್ರಗಳಿಗೆ, ಕೋವೀಡ್ ಸಂದರ್ಭದಲ್ಲಿ ಕೊಟ್ಟ ಉಚಿತ ಲಸಿಕೆಗಳಿಗೆ, ಕಳೆದ ಎರಡು ವರ್ಷಗಳಿಂದ ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆಯಡಿ ನೀಡುತ್ತಿರುವ ಉಚಿತ ಪಡಿತರ ಇವುಗಳಿಗೆ ದುಡ್ಡು ಎಲ್ಲಿಂದ ಬರಬೇಕು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಒಂದಕ್ಕೆ ವರ್ಷಕ್ಕೆ 50 ರಿಂದ 60 ಸಾವಿರ ಕೋಟಿ ಖರ್ಚಾಗುತ್ತದೆ. ಹೈವೆ- ರೈಲ್ವೆ ,ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಯಿಂದ 15ನೇ ಹಣಕಾಸು ಆಯೋಗದವರೆಗೂ 42 ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ಲಕ್ಷಾಂತರ ಕೋಟಿ ರೂ ಗಳನ್ನು ಕೇಂದ್ರ ಸರ್ಕಾರ ವಾಪಸ್ಸು ರಾಜ್ಯಗಳಿಗೆ ನೀಡುತ್ತದೆ ಎಂದು ವಿವರಿಸಿದ್ದಾರೆ.