ಬಿಜೆಪಿಯ ನಿರ್ಮಲಾ, ಜಗ್ಗೇಶ್‌; ಕಾಂಗ್ರೆಸ್‌ನ ಜೈರಾಮ್‌ ರಮೇಶ್‌ ಗೆಲುವು ಫಿಕ್ಸ್: ಸ್ಟಾರ್ ಹೋಟೆಲ್ ನಲ್ಲಿ ಜೆಡಿಎಸ್ ಶಾಸಕರು

ತೀವ್ರ ಕುತೂಹಲ ಮೂಡಿಸಿರುವ ಬಹುನಿರೀಕ್ಷೆಯ ರಾಜ್ಯಸಭೆ ಚುನಾವಣೆ ಇಂದು ನಡೆಯಲಿದೆ. ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿ ಇದ್ದಾರೆ.

Published: 10th June 2022 09:22 AM  |   Last Updated: 10th June 2022 12:59 PM   |  A+A-


Nirmala Sitharam, Jaggesh  And Jairam Ramesh

ನಿರ್ಮಲಾ, ಜಗ್ಗೇಶ್ ಮತ್ತು ಜೈರಾಮ್ ರಮೇಶ್

The New Indian Express

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಬಹುನಿರೀಕ್ಷೆಯ ರಾಜ್ಯಸಭೆ ಚುನಾವಣೆ ಇಂದು ನಡೆಯಲಿದೆ. ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿ ಇದ್ದಾರೆ. ಹೀಗಾಗಿ, ಮತ ಲೆಕ್ಕಾಚಾರ ಕುತೂಹಲ ಕೆರಳಿಸಿದೆ. ಇದರಲ್ಲಿ ಮೂವರಿಗೆ ಗೆಲುವು ಸುಲಭವಾದ್ರೂ, ನಾಲ್ಕನೇ ಸ್ಥಾನ ಗೆಲ್ಲಲು ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಜೆಡಿಎಸ್ ಗೆ ತನ್ನ ಶಾಸಕರ ಅಡ್ಡ ಮತದಾನದ ಬಗ್ಗೆ ಆತಂಕವಿದೆ.

ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ ಪಕ್ಷಳಿಗೆ ಈಗಿರುವ ಸಂಖ್ಯಾಬಲ ಹಾಗೂ ಅಭ್ಯರ್ಥಿಗಳಿಗೆ ಮಾಡಲಾಗುವ ಮತ ಹಂಚಿಕೆ ಆಧಾರದಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಮೊದಲ ಸುತ್ತಿನಲ್ಲೇ ಅನಾಯಾಸವಾಗಿ ಗೆಲುವು ಸಾಧಿಸುತ್ತಾರೆ.

ಉಳಿದಿರುವ ಒಂದು ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಜೆಡಿಎಸ್ ಬಳಿ ಅತಿ ಹೆಚ್ಚು ಅಂದರೆ 32 ಮೊದಲ ಪ್ರಾಶಸ್ತ್ಯದ ಮತಗಳು ಉಳಿಯುತ್ತವೆ. ಉಳಿದಂತೆ ಬಿಜೆಪಿ ಬಳಿ 32 ಹೆಚ್ಚುವರಿ ಮತಗಳು. 90 ಎರಡನೇ ಪ್ರಾಶಸ್ತ್ಯದ ಮತಗಳು ಇರುತ್ತವೆ. ಕಾಂಗ್ರೆಸ್ ಬಳಿ 25 ಹೆಚ್ಚುವರಿ ಮತಗಳು, 45 ಎರಡನೇ ಪ್ರಾಶಸ್ತ್ಯದ ಮತಗಳು ಉಳಿಯುತ್ತವೆ. ಜೆಡಿಎಸ್ ಬಳಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ಅವಕಾಶವಿಲ್ಲ.

ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್  ಕೇವಲ 25 ಮತಗಳನ್ನು ಹೊಂದಿದ್ದಾರೆ (ಒಬ್ಬ ಸ್ವತಂತ್ರ ಸೇರಿದಂತೆ). ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಜೆಡಿಎಸ್ ಜೊತೆ ಹೋಗುವ ಸಾಧ್ಯತೆ ಇಲ್ಲ ಎಂಬ ಸಂದೇಶವನ್ನು ರವಾನಿಸಿದೆ. ಬಿಜೆಪಿ 32 ಹೆಚ್ಚುವರಿ ಮತಗಳನ್ನು ಹೊಂದಿದ್ದು, ನಿರ್ಗಮಿತ ಎಂಎಲ್‌ಸಿ ಲೆಹರ್ ಸಿಂಗ್ ಸಿರೋಯಾ ಅವರನ್ನು ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಇದನ್ನೂ ಓದಿ: 'ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ, ನಾನು ಕಾಂಗ್ರೆಸ್ ನ್ನು ಇಷ್ಟಪಡುತ್ತೇನೆ': ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ

ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿರುವ ಜೆಡಿಎಸ್ 32 ಹೆಚ್ಚುವರಿ ಮತಗಳನ್ನು ಹೊಂದಿದ್ದರೂ ಕಾಂಗ್ರೆಸ್ ಬೆಂಬಲ ಪಡೆಯುವ ಪ್ರಯತ್ನ ಫಲ ನೀಡಿಲ್ಲ. ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಕೈಜೋಡಿಸಬೇಕು ಎಂದು ಕಾಂಗ್ರೆಸ್‌ಗೆ ಮನವರಿಕೆ ಮಾಡಿಕೊಡುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪ್ರಯತ್ನ ವ್ಯರ್ಥವಾಯಿತು. ಗುರುವಾರದವರೆಗೆ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ತುಟಿ ಬಿಚ್ಚಿಲ್ಲ. ಬದಲಾಗಿ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದರು.

ಈ ನಡುವೆ ಜೆಡಿಎಸ್ ತನ್ನ 20 ಶಾಸಕರನ್ನು ಸ್ಟಾರ್ ಹೊಟೇಲ್ ನಲ್ಲಿಟ್ಟಿದೆ. ಕಾಂಗ್ರೆಸ್‌ನ ಕೊಳಕು ರಾಜಕೀಯದಿಂದಾಗಿ ನಾವು ಈ ಕ್ರಮವನ್ನು ಕೈಗೊಳ್ಳಬೇಕಾಯಿತು. ಜೆಡಿಎಸ್ ಸೋಲಿಸುವುದೇ ಅಜೆಂಡಾ ಎಂದು ಸಿದ್ದರಾಮಯ್ಯ ನಮ್ಮ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿಗೆ ಆತ್ಮಸಾಕ್ಷಿಯ ಮತ ಹಾಕುವಂತೆ, ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ ಬರೆದಿರುವುದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ನಾವು ಅಲ್ಪಸಂಖ್ಯಾತ ನಾಯಕರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಮತ್ತು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ದಳಪತಿಗಳಿಂದ ಕೊನೆಯ ಹಂತದ ಕಸರತ್ತು ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಮೂಲಕ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿಸಲು ತಂತ್ರಗಾರಿಕೆ ಹೆಣೆಯಲಾಗಿದೆ. ಕಾಂಗ್ರೆಸ್​ನ ಐದಾರು ಮಂದಿ ಶಾಸಕರು ಜೆಡಿಎಸ್‍ ಅಭ್ಯರ್ಥಿಗೆ ಮತ ಚಲಾಯಿಸುವ ಸಾಧ್ಯತೆಯೂ ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದ ಮತಗಳನ್ನು ಹೈಕಮಾಂಡ್ ನಿರ್ದೇಶನದೊಂದಿಗೆ ಪಡೆಯಲು ನಿರಂತರವಾಗಿ ದಳಪತಿಗಳು ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಇವತ್ತು ಜೆಡಿಎಸ್ ನಲ್ಲಿದ್ದೇನೆ, ಜೆಡಿಎಸ್ ಗೆ ಮತ ಹಾಕಿದ್ದೇನೆ, ಮುಂದೇನಾಗುತ್ತೋ ನೋಡೋಣ: ಶಾಸಕ ಶಿವಲಿಂಗೇಗೌಡ

2018ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಮ್ ಎಂದು ಬಿಂಬಿಸಿದ್ದು ನಾಚಿಕೆಗೇಡಿನ ಸಂಗತಿ.  ರಾಜ್ಯಸಭೆ ಚುನಾವಣಾ ಫಲಿತಾಂಶವು ಯಾವ ಪಕ್ಷ ‘ಬಿ’ ಟೀಮ್ ಎಂಬುದನ್ನು ಬೆಳಕಿಗೆ ತರಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನಿಲುವಿನಿಂದಾಗಿ ಕಾಂಗ್ರೆಸ್ ಕೂಡ ಅದನ್ನೇ ಅನುಸರಿಸಿದೆ ಎಂದು ಕಿಡಿಕಾರಿದರು.

ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಚುನಾಯಿತ ಎಂದು ಘೋಷಿಸಿದ ಬಳಿಕ ಮತ್ತು ಮೊದಲ ಸುತ್ತಿನಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಕಣದಿಂದ ಕೈಬಿಡುವ ಪ್ರಕ್ರಿಯೆ ನಂತರ 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಕಣದಿಂದ ಕೈಬಿಡಲಾದ ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳು ಆತನಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ. ಈ ರೀತಿ ಎರಡನೇ ಪ್ರಾಶಸ್ತ್ಯದ ಮತಗಳ ಪ್ರಕ್ರಿಯೆ ನಡೆದು ನಾಲ್ಕನೆ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ. ಅಡ್ಡ ಮತದಾನ ನಡೆದರೆ, ಶಾಸಕರು ಮತದಾನಕ್ಕೆ ಗೈರು ಹಾಜರಾದರೆ, ಮತಗಳು ಕುಲಗೆಟ್ಟರೆ ಲೆಕ್ಕಾಚಾರದಲ್ಲಿ ಏರುಪೇರು ಆಗುವ ಸಾಧ್ಯತೆಗಳಿರುತ್ತವೆ


Stay up to date on all the latest ರಾಜಕೀಯ news
Poll
Former Prime Minister Rajiv Gandhi at an election rally in May 1991

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರ ತಪ್ಪು ಎಂದ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp