'ಕೈ-ದಳಪತಿಗಳ' ಜಿದ್ದಾಜಿದ್ದಿಗೆ ರಾಜ್ಯಸಭೆ ಚುನಾವಣೆ ಮುನ್ನುಡಿ: ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣು; ಜೆಡಿಎಸ್ ಗೆ ಕಾಂಗ್ರೆಸ್ ಚೆಕ್ ಮೇಟ್!
ಕಾಂಗ್ರೆಸ್ -ಜೆಡಿಎಸ್ ಜಿದ್ದಾಜಿದ್ದಿನ ಹೋರಾಟಕ್ಕೆ ರಾಜ್ಯಸಭೆ ಚುನಾವಣೆ ವೇದಿಕೆ ಕಲ್ಪಿಸಿದ್ದು, ಇನ್ನು ಮುಂದೆ ಜೆಡಿಎಸ್ ಬಿಜೆಪಿಗಿಂತ ಕಾಂಗ್ರೆಸ್ ವಿರುದ್ಧ ಇನ್ನಷ್ಟು ಆಕ್ರಮಣಕಾರಿಯಾಗುವ ಲಕ್ಷಣಗಳಿವೆ.
Published: 11th June 2022 10:22 AM | Last Updated: 11th June 2022 02:22 PM | A+A A-

ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಜಿದ್ದಾಜಿದ್ದಿನ ಹೋರಾಟಕ್ಕೆ ರಾಜ್ಯಸಭೆ ಚುನಾವಣೆ ವೇದಿಕೆ ಕಲ್ಪಿಸಿದ್ದು, ಇನ್ನು ಮುಂದೆ ಜೆಡಿಎಸ್ ಬಿಜೆಪಿಗಿಂತ ಕಾಂಗ್ರೆಸ್ ವಿರುದ್ಧ ಇನ್ನಷ್ಟು ಆಕ್ರಮಣಕಾರಿಯಾಗುವ ಲಕ್ಷಣಗಳಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಮುಸ್ಲಿಂ’ ಅಸ್ತ್ರ ಬಳಸಿ ಜೆಡಿಎಸ್ ಅಭ್ಯರ್ಥಿ ಸೋಲುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಈ ಬಾರಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಜತೆಗಿರಿಸಿಕೊಂಡೇ ರಾಜಕೀಯ ದಾಳ ಉರುಳಿಸಿದ್ದಾರೆ. ಇತ್ತೀಚಿನ ‘ನವ ಸಂಕಲ್ಪ ಶಿಬಿರ’ದ ಸಂದರ್ಭದಲ್ಲಿಯೂ ಪಕ್ಷವು ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿ ಕಾಪಾಡುವುದಾಗಿ ಹೇಳಿತ್ತು.
ಪಕ್ಷವು ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಿ ಹೇಳಿರುವುದು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯಲು ಬಯಸಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.
ರಾಜ್ಯಸಭೆಯ ನಾಲ್ಕನೇ ಸೀಟು ಬಿಜೆಪಿಗೆ ಹೋದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿವೆ. ಇನ್ನುಮುಂದೆ ಕಾಂಗ್ರೆಸ್ ಸಹವಾಸ ಮಾಡುವುದಿಲ್ಲ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜತೆಗೆ ಕಾಂಗ್ರೆಸ್ನ ಸಂಭವನೀಯ ದೋಸ್ತಿಯ ಬಾಗಿಲು ಮುಚ್ಚಿದಂತಾಗಿದೆ. ಇದರಿಂದ ಕಾಂಗ್ರೆಸ್ನ ಕೆಲವು ಮುಖಂಡರ ಕನಸು ಭಗ್ನಗೊಂಡಂತಾಗಿದೆ.
ಇದನ್ನೂ ಓದಿ: ರಾಜ್ಯಸಭೆ ನಂತರ ವಿಧಾನ ಪರಿಷತ್ ಚುನಾವಣೆ: ಹಳೆ ಮೈಸೂರು ಭಾಗದಲ್ಲಿ ಮೂರು ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ
ಈ ಚುನಾವಣೆ ವಿಚಾರದಲ್ಲಿ ಸಿದ್ದು ಮತ್ತು ಡಿ.ಕೆ.ಶಿ. ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಶಕ್ತಿಶಾಲಿ ಆಗುವುದು ಜೆಡಿಎಸ್ಗೂ ಇಷ್ಟವಿಲ್ಲ. ಆಂತರಿಕ ಸಮೀಕ್ಷೆಯ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಯತ್ತ ದೃಷ್ಟಿ ನೆಟ್ಟಿದೆ.
ಜೆಡಿಎಸ್ಗೆ ರಾಜ್ಯಸಭೆ ಸ್ಥಾನವನ್ನು ಗೆಲ್ಲಲು ಅವಕಾಶ ನೀಡಿದರೆ ಹಳೇ ಮೈಸೂರು ಭಾಗದಲ್ಲಿ ಪ್ರಾದೇಶಿಕ ಪಕ್ಷದ ಪ್ರಾಬಲ್ಯ ಹೆಚ್ಚಿಸಿಕೊಳ್ಳಬಹುದೆಂದು ಕಾಂಗ್ರೆಸ್ಗೆ ಮನವರಿಕೆಯಾಗಿತ್ತು, ಹೀಗಾಗಿ ಜೆಡಿಎಸ್ ಗೆ ಬೆಂಬಲ ನೀಡಲಿಲ್ಲ ಎನ್ನಲಾಗಿದೆ. ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.