ವಿಧಾನಪರಿಷತ್ ಚುನಾವಣೆ: ಹಣ ಹಂಚಿಕೆ ಆರೋಪಗಳ ನಡುವೆ ಸರಾಸರಿ ಶೇ.73.25 ರಷ್ಟು ಮತದಾನ

ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೇ ಸರಾಸರಿ ಶೇ. 73. 25 ರಷ್ಟು ಮತದಾನವಾಗಿದೆ.
ಮತದಾರರ ಚಿತ್ರ
ಮತದಾರರ ಚಿತ್ರ

ಬೆಂಗಳೂರು: ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೇ ಸರಾಸರಿ ಶೇ. 73. 25 ರಷ್ಟು ಮತದಾನವಾಗಿದೆ. ಕೆಲವು ಕಡೆಗಳಲ್ಲಿ ಹಣ ಹಂಚಿಕೆ ಆರೋಪದ ಹೊರತಾಗಿಯೂ 11 ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಪದವೀಧರರು ಹಾಗೂ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತಾರೂಢ ಬಿಜೆಪಿಯ ಪ್ರತಿಷ್ಠಿಗೆ ಕಾರಣವಾಗಿರುವ ಈ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ. ಪದವೀಧರ ಕ್ಷೇತ್ರಕ್ಕೆ ಹೋಲಿಸಿದರೆ ಶಿಕ್ಷಕರ ಕ್ಷೇತ್ರದಲ್ಲಿ ಶೇ. 80 ರಷ್ಟು ಮತದಾನ ವಾಗುವುದರೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಧಾಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಎಂಟನೇ ಬಾರಿಗೆ ಸ್ಪರ್ಧಿಸಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ದಾಖಲೆಯ ಶೇ. 84 ರಷ್ಟು ಮತದಾನವಾಗಿದೆ. ಧಾರವಾಡ, ಉತ್ತರ ಕನ್ನಡ, ಗದಗ ಮತ್ತು ಹಾವೇರಿ ಜಿಲ್ಲೆಯ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು. ಜೆಡಿಎಸ್ ನಿಂದ ಬಿಜೆಪಿ ಸೇರ್ಪಡೆಯಾಗಿರುವ ಬಸವರಾಜ ಹೊರಟ್ಟಿ ಅವರಿಗೆ ಈ ಚುನಾವಣೆ ಪ್ರತಿಷ್ಟೆಯಾಗಿದೆ. 

ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ. 59 ರಷ್ಟು ಕಡಿಮೆ ಮತದಾನವಾಗಿದೆ. ಆದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಸರಾಸರಿ ಶೇ. 80 ರಷ್ಟು ಮತದಾನವಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ. 70 ರಷ್ಟು ಮತದಾನವಾಗಿದೆ. 

ಈ ಮಧ್ಯೆ ಎಚ್ ಡಿ ಕೋಟೆ ತಾಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್  ಮತದಾರರಿಗೆ ರೂ. 2000  ಟೋಕನ್ ಹಂಚಿಕೆ ಮಾಡಿದ್ದಾರೆ ಎಂದು ಕೆಆರ್ ಆರ್ ಎಸ್ ರಾಜ್ಯಾಧ್ಯಕ್ಷ ಬಗಲಪುರ ನಾಗೇಂದ್ರ ಮೈಸೂರಿನಲ್ಲಿ ಆರೋಪಿಸಿದರು. ಬ್ಯಾಲೆಟ್ ಪೇಪರ್ ನಲ್ಲಿ ಪ್ರಾಶಸ್ತ್ಯದ ಮತಗಳನ್ನು ಗುರುತಿಸಲು ನೀಡಿದ ಪೆನಿನ್ನ ಗುಣಮಟ್ಟದ ಬಗ್ಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿ ಪುಟ್ಟರಂಗಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿಜಯಪುರದಲ್ಲಿ ಹಣ ಹಂಚುತ್ತಿದ್ದ  ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಮೂವರು ಸಹಚರರನ್ನು ಚುನಾವಣೆ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಕಂಡುಹಿಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣೆಯಿಂದ ಅಮಾನತು ಮಾಡಬೇಕೆಂದು ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಸೇರಿದಂತೆ ಐವರು ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com