ಜೂನ್ 20ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ರೋಡ್ ಶೋ ನಡೆಸಿ ಚುನಾವಣೆಗೆ ಪರೋಕ್ಷ ಪ್ರಚಾರ ಆರಂಭಿಸಲು ಬಿಜೆಪಿ ಚಿಂತನೆ

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೂನ್.20-21 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ರೋಡ್ ಶೋ ನಡೆಸಿ ಅಪಾರ ಪ್ರಮಾಣದ ಜನರ ಸೇರಿ ಚುನಾವಣೆಗಳಿಗೆ ಪರೋಕ್ಷ ಪ್ರಚಾರ ಆರಂಭಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೂನ್.20-21 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ರೋಡ್ ಶೋ ನಡೆಸಿ ಅಪಾರ ಪ್ರಮಾಣದ ಜನರನ್ನು ಸೇರಿಸಿ ಚುನಾವಣೆಗೆ ಪರೋಕ್ಷ ಪ್ರಚಾರ ಆರಂಭಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಎರಡು ದಿನಗಳ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೂನ್ 20ರಂದು ಉಪನಗರ (ಸಬ್ ಅರ್ಬನ್) ರೈಲು ಯೋಜನೆ ಶಂಕುಸ್ಥಾಪನೆಗಾಗಿ ಬೆಂಗಳೂರಿಗೆ ಮೋದಿಯವರು ಆಗಮಿಸಲಿದ್ದಾರೆ. ಇದೇ ದಿನ ಬೈಯ್ಯಪ್ಪನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಅಧಿಕೃತ ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ ಯಶವಂತಪುರ ಮತ್ತು ದಂಡು (ಕಂಟೋನ್ಮೆಂಟ್) ರೈಲು ನಿಲ್ದಾಣಗಳ ಪುನರ್ ವಿನ್ಯಾಸಕ್ಕೂ ಶಂಕು ಸ್ಥಾಪನೆ ಕೂಡ ನೆರವೇರಿಸಲಿದ್ದಾರೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಯಶವಂತಪುರ ಜಂಕ್ಷನ್ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ರೂ.315 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೈಲ್ವೆ ಟರ್ಮಿನಲ್ ನಿರ್ಮಿಸಲಾಗಿದ್ದು, ಜೂನ್ 6 ರಿಂದಲೇ ಟರ್ಮಿನಲ್ ನಿಂದ ರೈಲು ಸಂಚಾರ ಕೂಡ ಆರಂಭಿಸಲಾಗಿದೆ.

ನಗರದಲ್ಲಿ ಬಿಬಿಎಂಪಿ ಚುನಾವಣೆ ಹತ್ತಿರದಲ್ಲಿದ್ದು, ಮೋದಿಯವರು ಬೆಂಗಳೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಿ ಅಪಾರ ಪ್ರಮಾಣದಲ್ಲಿ ಜನರ ಸೇರಿಸಿ ಬಿಜೆಪಿ ಪ್ರಚಾರ ನಡೆಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ಪ್ಯಾಲೆಸ್ ಗ್ರೌಂಡರ್ ನ ಗಾಯತ್ರಿ ವಿಹಾರದಲ್ಲಿ ಪಕ್ಷದ ನಾಯಕರು ಹಾಗೂ ಹಿರಿಯ ಮುಖಂಡರೊಂದಿಗೆ ನಿನ್ನೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪ್ರಧಾನಿ ಮೋದಿಯವರು ಎಲ್ಲಿಯೇ ಹೋದರೂ ಅಲ್ಲಿ ಅಪಾರ ಪ್ರಮಾಣದಲ್ಲಿ ಜನರು ಸೇರುತ್ತಾರೆ. ತಮಿಳುನಾಡಿನ ಚೆನ್ನೈಗೆ, ತೆಲಂಗಾಣದ ಹೈದರಾಬಾದ್'ಗೆ ಇತ್ತೀಚೆಗೆ ಮೋದಿಯವರು ಭೇಟಿ ನೀಡಿದ್ದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಿಬಿಎಂಪಿ ಚುನಾವಣೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ನಾವು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರು, ಪಕ್ಷದ ಹಿರಿಯ ಪದಾಧಿಕಾರಿಗಳು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರು ಸೇರಿದಂತೆ ಇತರೆ ನಾಯಕರಿಗೆ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಈ ನಡುವೆ ಚೆನ್ನೈನಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿರುವುದು ತಮಿಳುನಾಡು ಲೋಕಸಭಾ ಚುನಾವಣೆ ವೇಳೆ ಭಾರಿ ಬದಲಾವಣೆಗಳಾಗುವ ಸೂಚನೆಗಳನ್ನು ನೀಡುತ್ತಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಮೊದಲಿಗೆ ಯಲಹಂಕಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿಯವರು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕ್ಯಾಂಪಸ್‌ಗೆ ಭೇಟಿ ನೀಡಿ ಅಲ್ಲಿ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ ಮತ್ತು ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯಲಹಂಕದಿಂದ ರಸ್ತೆ ಮಾರ್ಗವಾಗಿ ಐಐಎಸ್‌ಸಿಗೆ ಆಗಮಿಸಲಿದ್ದಾರೆ, ನಂತರ ಸಂಚಾರ ದಟ್ಟಣೆ ಉಂಟಾಗದಂತೆ ಮಾಡಲು ಕೊಮ್ಮಘಟ್ಟಕ್ಕೆ ಚಾಪರ್ ಮೂಲಕ ಸಂಚರಿಸಲಿದ್ದಾರೆ. ಅಲ್ಲಿ ಆರು ಹೊಸ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಬಳಿಕ ರಸ್ತೆ ಮೂಲಕ ಅಂಬೇಡ್ಕರ್ ಸಂಸ್ಥೆಗೆ ತೆರಳಿ ನಂತರ ಮೈಸೂರಿಗೆ ತೆರಳಲಿದ್ದಾರೆ. ಈ ವೇಳೆ ಬೆಂಗಳೂರು ಉತ್ತರ ಹಾಗೂ ದಕ್ಷಿಣದಲ್ಲಿ ರೋಡ್ ಶೋ ನಡೆಯಲಿದೆ. ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂನಲ್ಲಿ ಒಂದು ರೋಡ್ ಶೋ, ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಸೇರಿದಂತೆ ಮತ್ತೊಂದು ಕಡೆ ರೋಡ್ ಶೋ ನಡೆಯಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com