“ಬಿ.ಸಿ.ನಾಗೇಶ್ ಮಂತ್ರಿ ಸ್ಥಾನಕ್ಕೆ ನಾಲಾಯಕ್‌”: ವಿಪಕ್ಷ ನಾಯಕ ಸಿದ್ದರಾಮಯ್ಯ

ಪ್ರಾಥಮಿಕ ಶಿಕ್ಷಣ ಸಚಿವರಾಗಿರುವ ಬಿ.ಸಿ.ನಾಗೇಶ್ ಮಂತ್ರಿಯಾಗಲು ಅವರು ನಾಲಾಯಕ್ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ತೀರ್ಥಹಳ್ಳಿ: ಪ್ರಾಥಮಿಕ ಶಿಕ್ಷಣ ಸಚಿವರಾಗಿರುವ ಬಿ.ಸಿ.ನಾಗೇಶ್ ಮಂತ್ರಿಯಾಗಲು ಅವರು ನಾಲಾಯಕ್ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮತಾನಾಡಿದ ಅವರು, ಇ.ಡಿ ಯಿಂದ ರಾಹುಲ್‌ ಗಾಂಧಿ ಅವರ ವಿಚಾರಣೆ ಮಾಡುತ್ತಿರುವುದು ರಾಜಕೀಯ ದ್ವೇಷದಿಂದ. ಇದು ಹೊಸ ಪ್ರಕರಣವಲ್ಲ, ಹಿಂದೆಯೇ ಈ ಬಗ್ಗೆ ತನಿಖೆಯಾಗಿದೆ, ಮತ್ತೆ ಕೇಸನ್ನು ರೀಓಪನ್‌ ಮಾಡಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ರಾಜಕೀಯ ಕಿರುಕುಳ ನೀಡಲು ಷಡ್ಯಂತ್ರ ಮಾಡುತ್ತಿದ್ದಾರೆ.

1938 ರಲ್ಲಿ ಪ್ರಾರಂಭವಾದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಇವರು ಟ್ರಸ್ಟಿಗಳಾಗಿದ್ದಾರೆ. ಈ ಹಿಂದೆ ರಾಜೀವ್‌ ಗಾಂಧಿ ಕೂಡ ಟ್ರಸ್ಟಿ ಆಗಿದ್ದರು. ಇ.ಡಿ ವಿಚಾರಣೆ ರಾಜಕೀಯ ದುರುದ್ದೇಶದಿಂದ ಮಾಡುತ್ತಿರೋದು. ನಮ್ಮ ನಾಯಕರು ಭಾರತ್‌ ಜೋಡೋ ಯಾತ್ರ ಮಾಡುತ್ತಿದ್ದಾರೆ. ಅದಕ್ಕಾಗಿ ಅವರ ವರ್ಚಸ್ಸನ್ನು ಕಡಿಮೆ ಮಾಡಲು ಈ ರೀತಿ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ ಇಲ್ಲಿನ ಸರ್ಕಾರ 40% ಲಂಚ ಕೇಳುತ್ತಿದೆ ಎಂದು ಅವರಿಗೆ ಬಂದಿರುವ ಪತ್ರಕ್ಕೆ ಉತ್ತರ ಕೊಡಲಿ. ಇವತ್ತಿನವರೆಗೆ ಪತ್ರದ ಬಗ್ಗೆ ರಾಜ್ಯ ಸರ್ಕಾರದ ಸ್ಪಷ್ಟನೆಯನ್ನು ಅವರು ಕೇಳಿಲ್ಲ. ಮೊದಲು ಅದಕ್ಕೆ ಉತ್ತರ ನೀಡಲಿ.

ನಾಗೇಶ್‌ ಅವರು ಮಂತ್ರಿಯಾಗಲು ನಾಲಾಯಕ್‌, ಮೊದಲು ಚರಿತ್ರೆ ತಿರುಚಿಲ್ಲ ಎಂದು ಹೇಳಿದ್ದರು. ನಂತರ ಚರಿತ್ರೆ ತಿರುಚಿದ್ದು ಒಪ್ಪಿಕೊಂಡು ಬದಲಾವಣೆ ಮಾಡುತ್ತೇವೆ ಎಂದರು. ಹಾಗಾದರೆ 21 ಜನ ಸ್ವಾಮೀಜಿಗಳು ಧಾರವಾಡದಲ್ಲಿ ಸಭೆ ಸೇರಿ ಈ ಸರ್ಕಾರವನ್ನು ಖಂಡಿಸಿದರಲ್ಲ ಅದು ಸುಳ್ಳಾ? 71 ಜನ ಸಾಹಿತಿಗಳು ಸಹಿ ಮಾಡಿ ಸರ್ಕಾರಕ್ಕೆ ಪತ್ರ ನೀಡಿದ್ದು ಸುಳ್ಳಾ? ವಿರೋಧ ಜಾಸ್ತಿಯಾದ ಮೇಲೆ ರೋಹಿತ್‌ ಚಕ್ರತೀರ್ಥ ಅವರನ್ನು ತೆಗೆದು ಹಾಕಿದ್ದು ಯಾಕೆ? ಸುಮ್ಮಸುಮ್ಮನೆ ತೆಗೆದಿದ್ದಾ?

ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಿಸಿದ್ದ ಪಠ್ಯದಲ್ಲಿ ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಎಂದು ಇತ್ತು. ರೋಹಿತ್ ಚಕ್ರತೀರ್ಥ‌ ಅಧ್ಯಕ್ಷತೆಯ ಸಮಿತಿ ಇದನ್ನು ತೆಗೆದಿದೆ. ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದವರು ಯಾರು? ರೋಹಿತ್‌ ಚಕ್ರತೀರ್ಥನಾ? ಅಮಿತ್‌ ಶಾ ಅಥವಾ ನರೇಂದ್ರ ಮೋದಿ ಅವರು ಆಗಿದ್ದರಾ? ಸಂವಿಧಾನ ಕರಡು ರಚನಾ ಸಮಿತಿಯ ನೇತೃತ್ವ ವಹಿಸಿದ್ದು ಡಾ. ಬಿ. ಆರ್ ಅಂಬೇಡ್ಕರ್‌ ಅವರು. ಇದು ಸತ್ಯವಲ್ಲವಾ? ಅವರಿಗೆ ಸಂವಿಧಾನ ಶಿಲ್ಪಿ ಎಂದು ಹೆಸರು ಕೊಟ್ಟವರು ಟಿ.ಟಿ ಕೃಷ್ಣಮಾಚಾರಿ. ಇವರು ಕೂಡ ಕರಡು ರಚನಾ ಸಮಿತಿಯ ಒಬ್ಬ ಸದಸ್ಯರಾಗಿದ್ದವರು. ಬಿಜೆಪಿಗೆ ಇತಿಹಾಸ ತಿರುಚುವುದು ಮಾತ್ರ ಗೊತ್ತಿದೆ.

ಸಿಟಿ ರವಿ ಕಾನೂನು ಅಭ್ಯಾಸ ಮಾಡಿದ್ದಾರ? ನಾನು ಕಾನೂನು ಓದಿದ್ದೀನಿ ಅದಕ್ಕೆ ಕಾನೂನು ರೀತಿ ಮಾತಾನಾಡ್ತೀನಿ. ಅವರು ಓದಿಲ್ಲ ಅದಕ್ಕೆ ಕಾನೂನಿಗೆ ವಿರುದ್ಧ ಮಾತನಾಡ್ತಾರೆ.

ಪ್ರತಾಪ್‌ ಸಿಂಹನವರಿಗೆ ಚಾಲೆಂಜ್‌ ಮಾಡಿದ್ದು ನಾನಲ್ಲ, ನಮ್ಮ ಪಕ್ಷದ ವಕ್ತಾರರಾದ ಲಕ್ಷ್ಮಣ್‌. ಅವರು ಬಿ.ಇ ಪದವೀಧರ. ಇವರೇನು ಓದಿದ್ದಾರೆ? ಅಂಬೇಡ್ಕರ್‌ ಅವರಷ್ಟು ಓದಿದ್ದಾರ? ಮೊದಲು ಲಕ್ಷ್ಮಣ್‌ ಜೊತೆ ಚರ್ಚೆ ಮಾಡಲಿ, ಆಮೇಲೆ ನೋಡೋಣ.

ಎಲ್ಲೂ ನಾನೊಬ್ಬ ಆರ್ಥಿಕ ತಜ್ಞ ಎಂದು ಹೇಳಿಲ್ಲ. ನಾನು ಮನಮೋಹನ್‌ ಸಿಂಗ್‌ ಅವರ ರೀತಿ ಅರ್ಥಶಾಸ್ತ್ರಜ್ಞ ಎಂದು ಯಾವತ್ತಾದರೂ ಹೇಳಿದ್ದೀನಾ? ನಾನು ಕಾನೂನು ಪದವೀಧರ. ಆದರೂ 13 ಬಜೆಟ್‌ ಗಳನ್ನು ಮಂಡನೆ ಮಾಡಿದ್ದೇನೆ. ಪ್ರತಾಪ್‌ ಸಿಂಹ ಎಷ್ಟು ಬಜೆಟ್‌ ಮಂಡಿಸಿದ್ದಾರೆ? ಬರೆದು ಕೊಟ್ಟ ಬಜೆಟ್‌ ಅನ್ನು ನಾನು ಓದಿದ್ದು ಎಂದಾದರೆ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರು ಅದನ್ನೇ ಮಾಡಿರೋದ? ನಿರ್ಮಲಾ ಸೀತಾರಾಮನ್‌ ಅವರು ಅಧಿಕಾರಿಗಳು ಬರೆದು ಕೊಟ್ಟಿದ್ದನ್ನು ಓದಿದ್ದಾ? ಬಸವರಾಜ್‌ ಬೊಮ್ಮಾಯಿ ಒಂದು ಬಜೆಟ್‌ ಮಂಡಿಸಿದ್ದಾರೆ, ಅವರು ಅದನ್ನೇ ಮಾಡಿದ್ದಾ? ಅರುಣ್‌ ಜೇಟ್ಲಿ ಯಾವ ಅರ್ಥಶಾಸ್ತ್ರಜ್ಞರು? ಪ್ರಧಾನಿ ಮೋದಿ ಏನು ಓದಿದ್ದಾರೆ? ಅವರನ್ನು ಹಾಡಿ ಹೊಗಳುತ್ತಾರಲ್ಲ. ಅವರು ಪ್ರಧಾನಿ ಆಗಬಾರದು ಎಂದು ನಾನು ಹೇಳ್ತಿಲ್ಲ. ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ, ಆಗಲಿ ಬಿಡಿ. ಪ್ರತಾಪ್‌ ಸಿಂಹ ಲೋಕಸಭಾ ಸದಸ್ಯ ಆದ ಕೂಡಲೆ ಸರ್ವಜ್ಞನಾ?

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಧೀನದಲ್ಲಿ ಇರುವುದು. ಡಿ.ಕೆ ಸುರೇಶ್‌ ಒಬ್ಬರು ಗೌರವಾನ್ವಿತ ಸಂಸದ. ಪೊಲೀಸರು ಒಬ್ಬ ಸಂಸದನ ಜೊತೆ ಈ ರೀತಿ ನಡೆದುಕೊಂಡಿದ್ದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com