ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ, ವಿರೋಧ ಪಕ್ಷಗಳನ್ನು ತೆಗಳುವುದೇ ಬಿಜೆಪಿ ಜಾಯಮಾನ: ಮೋದಿ ತೆಗಳಿ ನೆಹರೂ ಹೊಗಳಿದ ಹೆಚ್ ಡಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಹಾಸನ:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಹೆಚ್.ಡಿ ದೇವೇಗೌಡರು ಪತ್ರ ಬರೆದಿದ್ದರು. ಈ ಬಗ್ಗೆ  ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಎಲ್ಲವೂ  ಕೇಶವಕೃಪಾದಲ್ಲಿ ತೀರ್ಮಾನವಾಗುತ್ತದೆ. ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ,  ಅವರನ್ನ ನೋಡಿದರೆ ನನಗೆ ಕನಿಕರ ಬರುತ್ತದೆ ಎಂದರು.

ಇಷ್ಟು ದಿನ ಇಡಿ ವಿಚಾರಣೆ ಏಕೆ: ಇದೇ ಸಂದರ್ಭದಲ್ಲಿ ಈ ಬಾರಿ ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಹೆಚ್ ಡಿಕೆ ಹಿಗ್ಗಾಮುಗ್ಗಾ ಬೈದರು. ರಾಹುಲ್ ಗಾಂಧಿ ವಿರುದ್ಧ ದಿನಗಟ್ಟಲೆ ಮ್ಯಾರಥಾನ್ ಇಡಿ ವಿಚಾರಣೆಯ ಅಗತ್ಯವೇನಿದೆ, ಇಡಿ ಬಳಿ ಎಲ್ಲಾ ದಾಖಲೆ ಇದೆ, ಹಾಗಿರುವಾಗ ಇಷ್ಟು ದಿನ ಕರೆದು ಗಂಟೆಗಟ್ಟಲೆ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸುವುದೇನಿದೆ, ಜನರ ಮುಂದೆ ಅನುಮಾನ ತರಿಸುವುದು ಇದರ ಉದ್ದೇಶವಲ್ಲವೇ ಎಂದು ಕೇಳಿದರು.

ಬಿಜೆಪಿ ಸರ್ಕಾರ ವಿರುದ್ಧ ಪರ್ಸೆಂಟೇಜ್ ಆರೋಪವನ್ನು ಇಡಿ ತನಿಖೆ ಮಾಡಿಸಿಲ್ಲವೇಕೆ ಎಂದರು. ಅಗ್ನಿಪಥ್ ಯೋಜನೆಯನ್ನು ತರುವ ಉದ್ದೇಶವೇನಿದೆ, ಇಷ್ಟು ದಿನ ಮಿಲಿಟರಿ, ಸೇನೆಯಲ್ಲಿ ನೇಮಕಾತಿ ಆಗಲಿಲ್ಲವೇ, ಈಗಲೇ ಪರೀಕ್ಷೆ ಬರೆದವರು, ನೇಮಕಾತಿಗಾಗಿ ಕಾಯುತ್ತಿರುವವರು ಏನು ಮಾಡಬೇಕು, ಈ ಬಗ್ಗೆ ಸ್ಪಷ್ಟತೆಯಿಲ್ಲವೇಕೆ, ಆರ್ ಎಸ್ಎಸ್ ಮೂಲಕ ಬಿಜೆಪಿಯ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿದರು.

ತಮ್ಮ ಸರ್ಕಾರದಲ್ಲಿ ಮತ್ತು ದೇವೇಗೌಡರು ಪ್ರಧಾನಿಯಾಗಿದ್ದ ಮಾಡಿದ್ದ ಶಂಕುಸ್ಥಾಪನೆ, ಕಾಮಗಾರಿಯ ಕ್ರೆಡಿಟ್ ನ್ನು ಮೋದಿಯವರು ಈಗ ತೆಗೆದುಕೊಳ್ಳುತ್ತಿದ್ದಾರೆ ಎಂದರು. ವಿರೋಧ ಪಕ್ಷದವರನ್ನು ತೆಗಳುವುದು, ಟೀಕೆ ಮಾಡುವುದು ಬಿಜೆಪಿಯ ಜಾಯಮಾನ, ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ವಿರೋಧ ಪಕ್ಷಗಳು ಮಾಡಿರುವ ಉತ್ತಮ ಕೆಲಸಗಳನ್ನು ಸ್ಮರಿಸುವ ಒಳ್ಳೆಯ ಗುಣವೇ ಅವರಿಗಿಲ್ಲ. ಆಧಾರ್ ಕಾರ್ಡು, ಜಿಎಸ್ ಟಿ, ನರಗಾ ಯೋಜನೆ ತಂದವರ್ಯಾರು ಮನಮೋಹನ್ ಸಿಂಗ್ ಸರ್ಕಾರ ಕೇಂದ್ರದಲ್ಲಿದ್ದಾಗ ಬಂದವು. ಹಲವಾರು ಸರ್ಕಾರಗಳು ಈ ದೇಶದಲ್ಲಿ ಆಡಳಿತ ನಡೆಸಿದ್ದಾಗ ಹಲವಾರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವೆಲ್ಲವನ್ನೂ ಮರೆಮಾಚಿ ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಬಂದ ಮೇಲೆಯೇ ಎಲ್ಲವೂ ಆಯಿತು ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಯನ್ನೇ ಹರಿಸಿದರು.

ದೆಹಲಿಯಂತಹ ರಾಷ್ಟ್ರ ರಾಜ್ಯಧಾನಿಯಲ್ಲಿ ಮನೆಗಳಿಲ್ಲದೆ ಕೂಲಿ ಕಾರ್ಮಿಕರು ಫ್ಲೈ ಓವರ್ ಕೆಳಗೆ ರಾತ್ರಿ ಮಲಗುತ್ತಾರೆ, ಮಲಗಿರುವ ಸಂದರ್ಭದಲ್ಲಿ ನಾಲ್ಕು ದಿನಗಳ ಹಿಂದೆ ವಾಹನ ಅಪಘಾತದಲ್ಲಿ ನಾಲ್ಕೈದು ದಿನಗಳ ಕೆಳಗೆ ಇಬ್ಬರು ಮಕ್ಕಳು ಸತ್ತಿದ್ದಾರೆ. ಇದುವೆಯೇ ಬಿಜೆಪಿ ಕಳೆದ 8 ವರ್ಷಗಳಲ್ಲಿ ಮಾಡಿರುವ ಕೆಲಸ, ಪ್ರಗತಿ. ಕಳೆದ ವಾರ ಬೆಂಗಳೂರಿನಲ್ಲಿ ರಾಜಕಾಲುವೆಯಲ್ಲಿ 24 ವರ್ಷದ ಯುವಕ ಕೊಚ್ಚಿ ಹೋಗಿದ್ದಾನೆ. ಅದರ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಕೇಳಿದರು.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ, ನೆಹರೂ ಪ್ರಧಾನ ಮಂತ್ರಿಗಳಿದ್ದಾಗ ಕೈಗಾರಿಕೆಗಳಿಗೆ, ನೀರಾವರಿ ಯೋಜನೆಗಳಿಗೆ, ಪಂಚವಾರ್ಷಿಕ ಯೋಜನೆಗಳಿಗೆ ನೀಡಿದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ನೆಹರೂರವನ್ನು ಹಾಡಿಹೊಗಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com