ಹರ್ಷ ಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಂತಹ ಪ್ರಕರಣಗಳನ್ನು ಬಿಜೆಪಿ ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.
Published: 01st March 2022 11:43 AM | Last Updated: 01st March 2022 01:01 PM | A+A A-

ಹರ್ಷ
ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಂತಹ ಪ್ರಕರಣಗಳನ್ನು ಬಿಜೆಪಿ ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಂದರೇಶ್ ಅವರು, ಹಿಜಾಬ್ ವಿಚಾರದಲ್ಲಿ ಬಿಜೆಪಿ ಹರ್ಷ ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದೆ, ಹರ್ಷ ಹತ್ಯೆ ಪ್ರಕರಣಕ್ಕ ಸಂಬಂಧಿಸಿದಂತೆ ದಿಕ್ಕು ತಪ್ಪದ ರೀತಿಯಲ್ಲಿ ನ್ಯಾಯಾಂಗ ತನಿಖೆಯಾಗಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಆದರೆ, ಹೆಣ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಮೂಲಕ ವೋಟಿಗಾಗಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಬಿಜೆಪಿಯವರು ನಿಜಕ್ಕೂ ಮನುಷ್ಯರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತು ಕೇಳಿಕೊಂಡು ಪ್ರಕರಣಗಳನ್ನು ಹಾಕಿಸಿಕೊಂಡು ಜೈಲಿನಲ್ಲಿದ್ದ ಹರ್ಷನನ್ನು ಬೆಳಗಾಗುವುದರೊಳಗೆ ರಾಷ್ಟ್ರೀಯ ನಾಯಕನನ್ನಾಗಿ ಮಾಡಿ, ಅದನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಈ ಹಿಂದೆಯೂ ಶಿವಮೊಗ್ಗದಲ್ಲಿಯ ಗೋಕುಲ್, ವಿಶ್ವನಾಥ್ ಶೆಟ್ಟಿ ಜೀವನ್ ಸೇರಿದಂತೆ ಅನೇಕ ಹಿಂದೂ ಯುವಕರು ಕೊಲೆಯಾಗಿದ್ದಾರೆ. ಬಿಜಪಿಯವರೇ ಹೇಳುವಂತೆ ರಾಜ್ಯದಲ್ಲಿ ಸುಮಾರು 37 ಜನ ಹಿಂದೂ ಯುವಕರು, ಮುಖಂಡರು ಹತ್ಯೆಯಾಗಿದ್ದಾರೆ. ಜಿಲ್ಲೆಯ ವಿಶ್ವನಾಥ ಶೆಟ್ಟಿ ಕೊಲೆಯಾದ ನಂತರ ಆತನ ತಂದೆ ತೀರಿಕೊಂಡರು. ಅವರ ತಾಯಿ ಇಂದಿಗೂ ಚಿಂದಿ ಆಯ್ದುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಆತನ ಬಗ್ಗೆ ಬಿಜೆಪಿಯವರಿಗೆ ಯಾವ ಕರುಣೆಯೂ ಇಲ್ಲ. ಈ ಹಿಂದೆ ಗೋಕುಲ್ ಎಂಬ ಹಿಂದೂ ಯುವಕನ ಹತ್ಯೆಯಾಗಿತ್ತು.
ಇದನ್ನೂ ಓದಿ: ವಾರಗಳ ಹಿಂದೆಯೇ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಚು ರೂಪಿಸಲಾಗಿತ್ತು!
ಆಗ ಯಾವುದೇ ಚುನಾವಣೆಗಳಿರಲಿಲ್ಲ. ಹಾಗಾಗಿ ಈ ಬಿಜೆಪಿಯವರು ಆತನ ಮನೆಗೆ ಒಂದು ಹಾರ ಹಾಕಿ ಬಂದರಷ್ಟೇ. ಎಲ್ಲಿಯೂ ಬಿಜೆಪಿಯವರು ಸಾಂತ್ವನ ಹೇಳಲಿಲ್ಲ. ಹಣದ ನೆರವು ನೀಡಲಿಲ್ಲ. ವೀರಾವೇಶ ಮಾಡಲಿಲ್ಲ. ಆದರೆ, ಈ ಘಟನೆಯನ್ನು ಮಾತ್ರ ಉತ್ತರಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಪ್ರಧಾನಿ ಮೋದಿ ಚುನಾವಣಾ ಭಾಷಣ ಮಾಡುವ ಸಂದರ್ಭದಲ್ಲಿಯೇ ಶಿವಮೊಗ್ಗದ ಘಟನೆ ಹೇಳಿ ಹಿಂದೂಗಳ ಭಾವನೆ ಕೆಣಕಿದ್ದಾರೆಂದು ದೂರಿದರು.
ಹರ್ಷ ಬಜರಂಗದಳದ ಕಾರ್ಯಕರ್ತನೂ ಅಲ್ಲ, ಬಿಜೆಪಿ ಕಾರ್ಯಕರ್ತನೂ ಅಲ್ಲ. ಆತನ ವಿರುದ್ಧ ಪ್ರಕರಣಗಳಿದ್ದವು. ಈ ಹಿಂದೆ ಜೈಲಿನಲ್ಲಿದ್ದಾಗ ಅವರ ನಡುವೆ ಜಗಳಗಳಾಗಿ ಶತ್ರುತ್ವ ಎದುರಾಗಿತ್ತ. ಹರ್ಷ ಬಜರಂಗದಳದಲ್ಲಿ ಇಲ್ಲ ಎಂದು ಅವರ ತಾಯಿ ಕೂಡ ಹೇಳಿದ್ದರು.
ನಗರದಲ್ಲಿ ಸಿಆರ್ಪಿಸಿ ಸೆಕ್ಷನ್ 144 ಹೇರಿದ್ದರೂ ಮೆರವಣಿಗೆ ನಡೆಸಲಾಯಿತು. ಬಿಜೆಪಿಯ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರ ಸೆಕ್ಷನ್ 144 ಅನ್ವಯಿಸುವುದಿಲ್ಲ. ಆರ್ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 6 ಮತ್ತು 7ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.