ಪಾದಯಾತ್ರೆಯಿಂದ ನೀರು ಬರೋದಿಲ್ಲ; ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ: ನಳಿನ್ ಕುಮಾರ್ ಕಟೀಲ್
ಪಂಚ ರಾಜ್ಯಗಳ ಮತದ ಎಣಿಕೆ ನಡೆಯುತ್ತಿದ್ದು, ಈಗ ಬಂದಿರೋ ಫಲಿತಾಂಶದ ಆಧಾರದಲ್ಲಿ 4 ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
Published: 10th March 2022 02:08 PM | Last Updated: 11th March 2022 03:15 PM | A+A A-
ಬೆಂಗಳೂರು: ಪಂಚ ರಾಜ್ಯಗಳ ಮತದ ಎಣಿಕೆ ನಡೆಯುತ್ತಿದ್ದು, ಈಗ ಬಂದಿರೋ ಫಲಿತಾಂಶದ ಆಧಾರದಲ್ಲಿ 4 ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಒಂದು ರಾಜ್ಯದಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಪಂಜಾಬ್‌ನಲ್ಲಿ ಈಗಿನ ಅಂಕಿ ಅಂಶದ ಪ್ರಕಾರ ಆಪ್ ಮುಂದಿದೆ. ಇದು ಭಾರತದ ಹೊಸ ಸಂಕ್ರಮಣ, ಮೋದಿ ಯುಗದ ಹೊಸ ಸಂಕಲ್ಪ ದಿನ. ಕೀಳು ರಾಜಕಾರಣ ಬಿಟ್ಟು ದೇಶದ ಏಳಿಗೆಗೆ ಕುತ್ತು ತಂದಿರುವವರಿಗೆ ಏಟು ಬಿದ್ದಿದೆ. ಇದು ಸ್ಥಿರ ಮತ್ತು ಅಭಿವೃದ್ಧಿ ಪರವಾದ ಜನರ ಆಶೀರ್ವಾದ. ಇದು ಅನಿರೀಕ್ಷಿತ ಅಲ್ಲ. ಕಳೆದ ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಧಿಸಿರುವ ಮೈಲುಗಳ ಸಂಕೇತ ಎಂದು ಹೇಳಿದರು.
ಈ ಗೆಲುವು ಐದು ವರ್ಷದಲ್ಲಿ ಬಿಜೆಪಿ ತೆಗೆದುಕೊಂಡ ಕ್ರಮದ ಗೆಲುವು. ಜನರಿಗೆ ಆಸರೆ ಆಗುವ ಪ್ರಜಾಪ್ರಭುತ್ವ ಆಶಯ. ರಾಜಕೀಯ ದಳಕ್ಕೆ ಮಾಡಿದ ಕಪಾಳ ಮೋಕ್ಷ. ರಾಮ ಮಂದಿರ ನಿರ್ಮಾಣ ಸಂಕಲ್ಪ, ಕಾಶಿ, ಭವ್ಯ ಕಾಶಿ ದಿವ್ಯ ಕಾಶಿ ನಿರ್ಮಾಣ, ಗಂಗಾ ಸ್ವಚ್ಚತೆ, ಗಂಗಾ ಪೂಜೆ ನಡುವೆ ಕಮಲ ಅರಳಿದೆ.
ಪರಿಪೂರ್ಣ ಆಶಿರ್ವಾದ ಜನತಾ ಪ್ರಭು ನೀಡಿದ್ದಾನೆ. ಉತ್ತರಾಖಂಡ್‌ನಲ್ಲಿ ಹೋಗುವಾಗ ಬ್ಯಾಗ್ ತುಂಬಿಸಿಕೊಂಡು, ಬರುವಾಗ ಖಾಲಿ ಮಾಡಿಕೊಂಡು ಬಂದಿದ್ದಾರೆ. ಮೋದಿ, ಜೆ.ಪಿ ನಡ್ಡಾ, ಕಾರ್ಯಕರ್ತರ ವರೆಗೂ ಒಂದಾಗಿ ದುಡಿದ ಶಕ್ತಿ ಗೆಲುವನ್ನ ತಂದು ಕೊಟ್ಟಿದೆ. ಬಹಳಷ್ಟು ಜನ ಡಬಲ್ ಇಂಜಿನ್ ಸರ್ಕಾರ ಅಂತ ಟೀಕೆ ಮಾಡ್ತಿದ್ರು. ಅದಕ್ಕೆ ಜನರು ಈಗ ಉತ್ತರ ನೀಡಿದ್ದಾರೆ ಎಂದು ಕಟೀಲ್ ತಿಳಿಸಿದರು.
ಪಾದಯಾತ್ರೆಯಿಂದ ನೀರು ಬರೋದಿಲ್ಲ ಎಂದು ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಯನ್ನು ಟೀಕಿಸಿದ ಅವರು, ರಾಜ್ಯದ ಜನರು ಇದೇ ರೀತಿಯ ಫಲಿತಾಂಶ ಇಲ್ಲೂ ನೀಡಲಿದ್ದಾರೆ. ರಾಜ್ಯದ ಜನತೆ ಮತ್ತೆ ಬಿಜೆಪಿಗೆ ಇಲ್ಲೂ ಜನ ಆಶಿರ್ವಾದ ಮಾಡಲಿದ್ದಾರೆ. ನಾಲ್ಕೂ ಕಡೆ ನಮ್ಮದೇ ಸರ್ಕಾರ ಇತ್ತು, ಮತ್ತೆ ನಾಲ್ಕು ಕಡೆ ಅಧಿಕಾರಕ್ಕೆ ಬರಲಿದ್ದೇವೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಇತ್ತು, ಆಪ್ ಬಂದಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಪಂಜಾಬ್‌ನಲ್ಲಿ ಇದ್ದದ್ದು ಕಾಂಗ್ರೆಸ್. ನಮಗೆ ಆಪ್ ನಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದರು.
ಪಂಜಾಬ್ ನಲ್ಲಿ ರೈತರ ಕಾಯಿದೆ ಬಿಜೆಪಿಗೆ ಮುಳುವಾಯ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಪರವಾಗಿ ಬಿಜೆಪಿ ಇದೆ. ರೈತರ ಪ್ರತಿಭಟನೆ ನಮಗೆ ಯಾವುದೇ ಹೊಡೆತ ನೀಡಿಲ್ಲ. ರೈತರೂ ಕೂಡ ನಮ್ಮ ಪರವಾಗಿ ಕೊನೆವರೆಗೂ ಇರಲಿದ್ದಾರೆ ಎಂದರು. ಡಿಸೆಂಬರ್‌ನಲ್ಲಿ ಚುನಾವಣೆಗೆ ಹೋಗುವ ವಿಚಾರ ಕುರಿತು ಮಾತಾಡಿದ ಅವರು, ಹತ್ತಾರು ಜನ ಹತ್ತಾರು ತರ ಕನಸು ಕಾಣ್ತಿದ್ದಾರೆ. ಯಾರ ಕನಸು ನನಸಾಗೋದಿಲ್ಲ. ರಾಜ್ಯದಲ್ಲಿ ಸದ್ಯ ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ಎಲ್ಲವೂ ಮುಂದುವರೆಯಲಿದೆ ಅಂತಲೂ ಕಟೀಲ್ ತಿಳಿಸಿದರು.