
ಸಿಟಿ ರವಿ
ಬೆಂಗಳೂರು: ಅಲ್ಪಸಂಖ್ಯಾತರ ಓಲೈಕೆ ಮಾಡಿ, ಹಿಂದೂ ವಿರೋಧಿಗಳಿದ್ದವರಿಗೆ ಈಗ ಮುಖಭಂಗವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ 5 ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಐದೂ ರಾಜ್ಯದ ಜನ ಆಯಾ ರಾಜ್ಯದ ಸ್ಥಿತಿ ಅನುಗುಣವಾಗಿ ಆಯ್ಕೆ ಮಾಡಿದ್ದಾರೆ. ಐದರಲ್ಲಿ ನಾಲ್ಕು ಬಿಜೆಪಿ ಅಧಿಕಾರದಲ್ಲಿ ಇತ್ತು. ಆಡಳಿತ ಇರುವೆಡೆ ಆಡಳಿತ ವಿರೋಧಿ ಇದೆ ಅಂತ ಭಾವಿಸಿದ್ದೆವು. ಆದರೆ ನಾಲ್ಕು ಕಡೆ ಆಡಳಿತ ಪರ, ಜನಸ್ನೇಹಿ ಆಡಳಿತಕ್ಕೆ ರಾಷ್ಟ್ರ ಹಿತದ ರಾಜಕಾರಣಕ್ಕೆ ಮತ ಹಾಕಿದ್ದಾರೆ. ಜಾತಿ ಆಧಾರದ ಮೇಲೆ ರಾಜಕಾರಣ ಮಾಡ್ತಾರೆ ಅನ್ನೋ ಕಾಲ ಇತ್ತು. ಅಲ್ಪಸಂಖ್ಯಾತರ ಓಲೈಕೆ ಮಾಡಿ, ಹಿಂದೂ ವಿರೋಧಿಗಳಿದ್ದವರಿಗೆ ಈಗ ಮುಖಭಂಗವಾಗಿದೆ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
YM(ಯೋಗಿ+ಮೋದಿ) ಸೂತ್ರದ ಮೇಲೆ ಎರಡು ದಶಕ ಯಶಸ್ವಿಯಾಗಿದ್ರು. ಆದ್ರೀಗ ಜಾತಿ ರಾಜಕಾರಣ ಈಗ ನಡೆಯಲ್ಲ ಅನ್ನೋದು ಸಾಬೀತಾಗಿದೆ. ಈಗ ಗೆದ್ದಿರೋದು ಗರೀಭಿ ಕಲ್ಯಾಣ, ಸಮರ್ಥ ಸಾಧನೆ, ಅಭಿವೃದ್ಧಿ ಕಾರ್ಯ. ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಮೇಲಿಟ್ಟಿರೋ ನಂಬಿಕೆ. ನೇರವಾಗಿ ಸರ್ಕಾರದ ಯೋಜನೆ ತಲುಪಿದಾಗ ಜನ ಮತವಾಗಿ ನೀಡಿದ್ದಾರೆ. ಸೋರಿಕೆ ಇಲ್ಲದ, ಭ್ರಷ್ಟಾಚಾರ ವಿರೋಧಿ ಸರ್ಕಾರಕ್ಕೆ ಜನ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ಇಲ್ಲದ, ನೀತಿಯೂ ಇಲ್ಲದ ರಾಜಕಾರಣಕ್ಕೆ ಜೋತು ಬಿದ್ದಿದೆ. ಕುಟುಂಬದ ಹೊರಗೆ ನಾಯಕತ್ವ ಇಲ್ಲದ ಸ್ಥಿತಿಗೆ ತಲುಪಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಪ್ರಿಯಾಂಕ್ ಗಾಂಧಿ ವಾದ್ರಾ ಅವರ ಲಡಿಖಿಯೋ ಲಡೇಂಗಾ ಅನ್ನೋದು ಸುದ್ದಿಯಾಯಿತೇ ಹೊರೆತು, ಮತವಾಗಿ ಪರಿವರ್ತನೆ ಆಗಲಿಲ್ಲ. ಅವರಿಗೆ ಬಿದ್ದಿರೋ ಮತಗಳೇ 2.7ರಷ್ಟು ಮಾತ್ರ. ಗಾಂಧಿ ಅವರ ಹೇಳಿಕೆಯಂತೆ ಕಾಂಗ್ರೆಸ್ ವಿಸರ್ಜಿಸಿ ಅನ್ನೋ ಮಾತನ್ನ ಹೇಳಿದ್ರು. ಅವರ ಮಾತನ್ನ ಒಂದೋಂದೇ ರಾಜ್ಯದಲ್ಲಿ ಮಾಡ್ತಿದ್ದಾರೆ. ಗೋವಾದಲ್ಲಿ ನಿರಂತರವಾಗಿ ಮೂರು ಬಾರಿ ಯಾವ ಪಕ್ಷವೂ ಅಧಿಕಾರ ಗದ್ದಿಗೆಗೆ ಏರಿರಲಿಲ್ಲ. ಗೋವಾ ರಾಜಕಾರಣದಲ್ಲಿ ಐತಿಹಾಸಿಕ ಸಾಧನೆ. ಇದು ರಾಷ್ಟ್ರ ವಾದ, ವಿಕಾಸವಾದ ಜನ ಕೊಟ್ಟಿರೋ ಬಳುವಳಿ ಎಂದು ತಿಳಿಸಿದರು.
ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶ: ಕರ್ನಾಟಕದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದವರು ಈಗ ಹಿಂದೇಟು!
ಋಣಾತ್ಮಕವಾಗಿ ಅಧಿಕಾರ ಹಿಡಿಯಬಹುದು ಅನ್ನೋದಕ್ಕೆ ಕಡಿವಾಣ ಬಿದ್ದಿದೆ. ಮೊದಲ ಬಾರಿ ಅವರ ನೇತೃತ್ವ ಇರಲಿಲ್ಲ. ರಾಜ್ಯದ ಜನ ಮನೋಹರ್ ಪರಿಕ್ಕರ್ ಅವರ ರಾಷ್ಟ್ರವಾದ ಬೆಂಬಲಿಸಿದ್ದಾರೆ. ಸಮಗ್ರ ಗೋವಾ ಅಭಿವೃದ್ಧಿಗೆ ಜನ ಮತ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರೂ ಸಹ ತಳಮಟ್ಟದಲ್ಲಿ ಗುರ್ತಿಸಿ ಕೆಲಸ ಮಾಡುವಲ್ಲಿ ಯಶಸ್ವಿಯಾದರು. ರಾಮನ ಕಾರ್ಯಕ್ಕೆ ಪುಟ್ಟ ಅಳಿಲು ನೆರವಾದಂತೆ, ಕರ್ನಾಟಕ ಕಾರ್ಯಕರ್ತರು ಸೇವೆ ಮಾಡಲು ಅವಕಾಶ ನೀಡಿದ್ರು. ನಾವು ನಮ್ರತೆಯಿಂದ ಇದನ್ನ ಸ್ವೀಕರಿಸ್ತೇವೆ ಎಂದು ತಿಳಿಸಿದರು.
ಮಜಾ ಅಂದ್ರೆ ಗೋವಾ ಚುನಾವಣೆ ಫಲಿತಾಂಶ ಮೊದಲೇ ಕರ್ನಾಟಕದಿಂದ ಸ್ಪೆಷಲ್ ಫ್ಲೈಟ್ ಮಾಡಿಕೊಂಡು ಬಂದ್ರು. ರಾಜ್ಯಪಾಲರ ಅನುಮತಿ ಕೂಡ ಪಡೆದಿದ್ರು. ಸರ್ಕಾರ ರಚನೆಗೆ ಅವಕಾಶ ನೀಡಿ ಅಂತ ಒಂದು ದಿನ ಮೊದಲೇ ಅನುಮತಿ ಕೇಳಿದ್ರು. ಕಾಂಗ್ರೆಸ್ ನವರು ನಾವೇ ಅಧಿಕಾರಕ್ಕೆ ಬರ್ತೀವಿ ಅಂತ ಕೋಟ್ ಹೊಲಿಸಿಕೊಂಡಿದ್ರು. ಪೋರ್ಟ್ ಪೊಲಿಯೋ ಕೂಡ ಹಂಚಿಕೊಂಡಿದ್ರು. ನನ್ನ ಕಡೆ ಇದ್ರೆ ಈ ಪೋರ್ಟ್ ಪೊಲಿಯೋ ನಿನಗೆ, ಇದು ನನಗೆ ಅಂತ ಹಂಚಿಕೊಂಡಿದ್ರು ಎಂದು ಹೆಸರೇಳದೆ ಡಿ.ಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದರು.
ಒಬ್ಬರಾಗಿದ್ರೆ ಹೆಸರೇಳಬಹುದಿತ್ತು, ಅನೇಕರಿದ್ದಾರೆ. ಹೆಸರೇಳ್ತಾ ಹೋದ್ರೆ ಓಟರ್ ಲೀಸ್ಟ್ ತರ ಸಿಗಲಿದೆ. ಕರ್ನಾಟಕ ಜನ ರಾಷ್ಟ್ರ ಹಿತದಿಂದಲೇ ಓಟ್ ಹಾಕಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೋದಿ ಬೆಂಬಲಿಸಲು ಜನ ನಿರ್ಧಾರ ಮಾಡಲಿದ್ದಾರೆ. ನಡ್ಡಾ, ಅಮಿತ್ ಶಾ, ಸಂತೋಷ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಈ ಬಾರಿ ವಿಶೇಷ ಅಂದ್ರೆ ಗೋವಾದಲ್ಲಿ 19ಜನ ಹೊಸದಾಗಿ ಆಯ್ಕೆಯಾದವರಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶ ಬಂದ ಬಳಿಕ, ಲಕ್ಷಾಂತರ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಕೋರ್ಟ್ ಮಧ್ಯಪ್ರವೇಶ ಮಾಡಿ ತನಿಖೆಗೆ ಆದೇಶ ಮಾಡಬೇಕಾಯ್ತು. ನಾಲ್ಕು ಕಡೆ ಬಿಜೆಪಿ ಬಂದಿದೆ, ಎಲ್ಲೂ ಈ ರೀತಿ ಘಟನೆ ನಡೆಯಲು ಬಿಟ್ಟಿಲ್ಲ. ನಮ್ಮ ನೀತಿಯೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್. ಸಿದ್ದರಾಮಯ್ಯ ಅವರ ರೀತಿ ಸರ್ವನಾಶ್ ಅಲ್ಲ ಎಂದು ವಿಪಕ್ಷ ನಾಯಕನಿಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರ ಸ್ಟೇಟ್ ಮೆಂಟ್ ನೋಡಿದೆ. ನವೀನ್ ಸಾವಿಗೆ ಮೋದಿಯೇ ಕಾರಣ ಅಂತ. 20 ಸಾವಿರ ಜನರನ್ನ ಕರೆತಂದಿದ್ದೇವೆ ಯಾರು ಕಾರಣ. ಬಂಕರ್‌ನಲ್ಲೇ ಇದ್ದಿದ್ರೆ ನವೀನ್‌ನನ್ನೂ ಕರೆ ತರುತಿದ್ದೆವು. ಆದ್ರೆ ದುರ್ದೈವ ಸಾಧ್ಯವಾಗಲಿಲ್ಲ. ಹಿಂದುತ್ವ ಅನ್ನೋದು ಎಷ್ಟು ಬಲವಾಗುತ್ತೋ, ರಾಷ್ಟ್ರವಾದ ಕೂಡಾ ಅಷ್ಟೇ ಬಲವಾಗುತ್ತೆ. ಸಿದ್ದರಾಮಯ್ಯ ಅಂತವರು ನಮ್ಮಂತವರ ನಡುವೆ ಇದ್ದಾರೆ. ಕೇಸರಿ ಪೇಟ ತಂದ್ರೆ ಬಿಸಾಕು, ಸಾಬ್ರು ಟೋಪಿ ತಂದ್ರೆ ಹಾಕ್ಕೋ ಅನ್ನೋದು. ಆದ್ರೆ ಹಿಂದುತ್ವ ಹಾಗಲ್ಲ, ಕೇಸರಿ ಟೋಪಿಯೂ ಹಾಕ್ಕೊ, ಸಾಬ್ರು ಟೋಪಿಯೂ ಹಾಕ್ಕೋ ಅನ್ನೋದು ಎಂದು ಹೇಳಿದರು.
ಈ ವರ್ಷಾಂತ್ಯದಲ್ಲಿ ಗುಜರಾತ್ ನಂತರ ಕರ್ನಾಟಕ ಚುನಾವಣೆ ಬರುತ್ತೆ. ದೇಶದ ಹಿತದೃಷ್ಟಿಯಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಬರಬೇಕು. ಇಲ್ಲದಿದ್ರೆ ಪ್ರತೀ ವರ್ಷ ಚುನಾವಣೆಯನ್ನ ಎದುರಿಸೋದೇ ಅಗುತ್ತೆ. ಚುನಾವಣೆ ಗೆಲುವು ಒಂದು ರೀತಿ ಕೆಲಸ ಮಾಡ್ತಿದ್ರೆ, ಸೋಲು ಮತ್ತೊಂದು ರೀತಿ ಕೆಲಸ ಮಾಡುತ್ತೆ ಎಂದು ತಿಳಿಸಿದರು. ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವರಾದ ಬೈರತಿ ಬಸವರಾಜ್, ಆನಂದ್ ಸಿಂಗ್, ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಅರವಿಂದ್ ಬೆಲ್ಲದ್ ಹಾಗೂ ರಾಜೂಗೌಡ ಉಪಸ್ಥಿತರಿದ್ದರು.