ಬಜೆಟ್ ಅಧಿವೇಶನ ಅಂತ್ಯಗೊಳ್ಳುತ್ತಿದ್ದಂತೆಯೇ ಸಿಎಂ ಬೊಮ್ಮಾಯಿ, ಬಿಎಸ್'ವೈ ರಾಜ್ಯ ಪ್ರವಾಸ
ಮಾರ್ಚ್ 28 ರಂದು ಬಜೆಟ್ ಅಧಿವೇಶನ ಅಂತ್ಯಗೊಳ್ಳಲಿದ್ದು, ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರೊಂದಿಗೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಿದ್ದಾರೆಂದು ತಿಳಿದುಬಂದಿದೆ.
Published: 11th March 2022 08:37 AM | Last Updated: 11th March 2022 03:22 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಾರ್ಚ್ 28 ರಂದು ಬಜೆಟ್ ಅಧಿವೇಶನ ಅಂತ್ಯಗೊಳ್ಳಲಿದ್ದು, ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರೊಂದಿಗೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಿದ್ದಾರೆಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿಯವರು, ‘ನಾವು ಬಲಿಷ್ಠ ಪಕ್ಷವನ್ನು ಕಟ್ಟುತ್ತೇವೆ. ಎಲ್ಲೆಲ್ಲಿ ನಮಗೆ ನೆಲೆ ಇದೆಯೋ ಅಲ್ಲಿ ನಾವು ಅದನ್ನು ಬಲಪಡಿಸುತ್ತೇವೆ ಮತ್ತು ಅಸ್ತಿತ್ವವಿಲ್ಲದ ಪ್ರದೇಶದಲ್ಲಿ ನೆಲೆ ನಿರ್ಮಿಸುವ ಕೆಲಸ ಮಾಡುತ್ತೇವೆಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಮುಕ್ತವಾಗಲಿರುವ ಮುಂದಿನ ರಾಜ್ಯ ಕರ್ನಾಟಕ: ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಸಿಎಂ ಬೊಮ್ಮಾಯಿ
ಯೋಜನೆಗಳ ಪ್ರಚಾರವನ್ನೂ ಬೂತ್ ಮಟ್ಟದಿಂದ ಕಾರ್ಯಕರ್ತರು ಮಾಡಬೇಕು. ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು. ಭಾಜಪದ ಸದೃಢ ಸಂಘಟನೆ ಮತ್ತು ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳು ಮುಂದಿನ ಚುನಾವಣೆಯಲ್ಲಿ ಬಳಕೆ ಮಾಡಿ ಜನರ ಹೃದಯವನ್ನು ಗೆದ್ದು 2023ರ ಚುನಾವಣೆಯಲ್ಲಿ ಭಾಜಪದ ಕಮಲವನ್ನು ಅರಳಿಸಿ, ಮುಂದಿನ 5 ವರ್ಷ ಸುಭಿಕ್ಷವಾದ ನಾಡನ್ನು ಕಟ್ಟುವ ಸಂಕಲ್ಪವನ್ನು, ಪಣವನ್ನು ತೊಟ್ಟಿದ್ದೇವೆ.
ಅಧಿವೇಶನ ಮುಗಿದ ಕೂಡಲೇ ನಮ್ಮ ನಾಯಕರಾದ ಯಡಿಯೂರಪ್ಪನವರ ಸಮೇತ, ಕೇಂದ್ರದ ನಾಯಕರ ಜೊತೆ ಇಡೀ ರಾಜ್ಯವನ್ನು ಸುತ್ತಿ ಭಾಜಪದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಹೊಸ ಹೊಸ ಕ್ಷೇತ್ರಗಳಲ್ಲಿ ಭಾಜಪವನ್ನು ಆರಿಸುವವರೆಗೂ ಬಿಡುವುದಿಲ್ಲ. ಈಗಾಗಲೇ ಕಾರ್ಯಪ್ರವೃತ್ತವಾಗಿದ್ದೇವೆ. ಅದಕ್ಕಾಗಿ ಸರ್ಕಾರದ ವತಿಯಿಂದ ಎಲ್ಲಾ ಜನಪರವಾದ ಕಾರ್ಯಕ್ರಮಗಳನ್ನು ಮಾಡಲು ನಾವು ಸನ್ನದ್ಧರಾಗಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಪಕ್ಷದ ಸಂಘಟನೆ, ಬಲಪಡಿಸುವುದು, ಭಾಜಪವನ್ನು ಅಧಿಕಾರಕ್ಕೆ ತರಲು ಎಲ್ಲಾ ಕಾರ್ಯಕ್ರಮಗಳಿಗೆ ಶಕ್ತಿ ತುಂಬಲು ಸನ್ನದ್ಧರಾಗಬೇಕೆಂದು ಕರೆ ನೀಡಿದರು.