'ನಮ್ಮಪ್ಪನಾಣೆಗೂ ಯಡಿಯೂರಪ್ಪ- ಕುಮಾರಸ್ವಾಮಿ ಸಿಎಂ ಆಗಲ್ಲ ಎಂದರು, ಇಬ್ಬರೂ ಆಗಿಬಿಟ್ಟರು: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಮಾತಿನೇಟು
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಅಫೆಕ್ಟ್ ರಾಜ್ಯ ರಾಜಕೀಯದ ಮೇಲೆ ಜೋರಾಗಿಯೇ ಬೀರಿದಂತೆ ಕಾಣುತ್ತಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಚುನಾವಣೆ ಎದುರಿಸುತ್ತಿರುವ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು, ರಾಜಕೀಯ ನಾಯಕರ ವಾಗ್ದಾಣಗಳು ಜೋರಾಗಿವೇ ಇವೆ.
Published: 11th March 2022 02:08 PM | Last Updated: 11th March 2022 03:32 PM | A+A A-

ಸಿದ್ದರಾಮಯ್ಯ-ಬಸವರಾಜ ಬೊಮ್ಮಾಯಿ
ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಅಫೆಕ್ಟ್ ರಾಜ್ಯ ರಾಜಕೀಯದ ಮೇಲೆ ಜೋರಾಗಿಯೇ ಬೀರಿದಂತೆ ಕಾಣುತ್ತಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಚುನಾವಣೆ ಎದುರಿಸುತ್ತಿರುವ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು, ರಾಜಕೀಯ ನಾಯಕರ ವಾಗ್ದಾಣಗಳು ಜೋರಾಗಿವೇ ಇವೆ.
ಇಂದು ವಿಧಾನಸಭೆಯಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಬಿ ಎಸ್ ಯಡಿಯೂರಪ್ಪ ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ, ಕಾಂಗ್ರೆಸ್-ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ಮುಂದಿನ ಸಿಎಂ ಕುರಿತು ಮಾತಿಗೆ ತಿರುಗೇಟು ನೀಡಿದರು.
ನಂತರ ಇದಕ್ಕೆಲ್ಲಾ ಪ್ರತಿಕ್ರಿಯೆಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೀಡಿದರು. ಸತ್ಯ, ವಾಸ್ತವಾಂಶ ಗೊತ್ತಿದ್ದರೂ ಕೂಡ ಅದರ ತದ್ವಿರುದ್ಧವಾಗಿ ಜೋರಾಗಿ ಹೇಳಿದರೆ ಜನರು ನಂಬುತ್ತಾರೆ ಎಂದು ಸಿದ್ದರಾಮಯ್ಯನವರು ಭಾವಿಸಿದಂತಿದೆ. ''Loud voice need not be truth'' ಎಂಬ ಮಾತಿನಂತಾಗಿದೆ ಸಿದ್ದರಾಮಯ್ಯನವರು ಪರಿಸ್ಥಿತಿ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: 'ಬಿಜೆಪಿ ಅಧಿಕಾರಕ್ಕೆ ಬಂದರೂ ನೀವು ಸಿಎಂ ಆಗಲ್ಲ, ನಿಮ್ಮ ನಾಯಕರು ಯಾರು ಸ್ವಾಮಿ': ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ವಾಗ್ವಾದ
ಕಳೆದ ಬಾರಿ ಚುನಾವಣೆಯಲ್ಲಿ ನಮ್ಮಪ್ಪನಾಣೆಗೂ ಬಿ ಎಸ್ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದರು, ಆದರೆ ಇಬ್ಬರೂ ಮುಖ್ಯಮಂತ್ರಿಗಳಾದರು. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರೂ ಅಧಿಕಾರಕ್ಕೆ ಬರಲಿಲ್ಲ. ಹೀಗಾಗಿ ಸ್ವಸ್ತ್ಯುತಿ ನಮ್ಮನ್ನು ಗಾಳಿ ತುಂಬಿಸಿದ ಬಲೂನಿನಂತೆ ಮೇಲಕ್ಕೆ ಹಾರಿಸುತ್ತದೆ. ನೆಲದ ಮೇಲೆ ನಿಲ್ಲಿಸುವುದಿಲ್ಲ, ಆದರೆ ವಾಸ್ತವಾಂಶ ಬೇರೆಯೇ ಎಂದು ವ್ಯಂಗ್ಯವಾಡಿದರು.
ಇಂದಿನ ವಸ್ತುಸ್ಥಿತಿ 5 ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಬರುತ್ತಿಲ್ಲ, ಆಡಳಿತ ವಿರೋಧಿ ಅಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದು ರಾಜಕೀಯದಲ್ಲಿ ನಿರ್ಧಾರದ ವಿಷಯವಾಗುತ್ತಿದೆ. ಬಿಜೆಪಿ ಮಾತ್ರ ಇತ್ತೀಚಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಪಕ್ಷವಾಗಿದೆ ಎಂದರು.
ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಸೋತಿದ್ದು ಬಹಳ ದೊಡ್ಡ ಆಘಾತ. ಅಧಿಕಾರದಲ್ಲಿದ್ದು ಅಲ್ಲಿ ಗೆದ್ದು ತೋರಿಸಬೇಕಾಗಿತ್ತು. ಜನರು ವೇಗವಾಗಿ ನಿರೀಕ್ಷೆಗಳನ್ನು ಬದಲಿಸುತ್ತಿದ್ದಾರೆ. ಜನರ ನಾಡಿಮಿಡಿತ ಚುನಾವಣಾ ಸಂದರ್ಭದಲ್ಲಿ ಗೊತ್ತಾಗುವುದಿಲ್ಲ. ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ, ಇಲ್ಲಿ ಕರ್ನಾಟಕದಲ್ಲಿ ಗೆದ್ದೇ ಬಿಟ್ಟಿದ್ದೇವೆ ಎಂಬರ್ಥದಲ್ಲಿ ಕಾಂಗ್ರೆಸ್ ನಾಯಕರು ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಸಿಎಂ ಬೊಮ್ಮಾಯಿ ಸಿದ್ದರಾಮಯ್ಯನವರಿಗೆ ಮಾತಿನ ಛಾಟಿಯೇಟು ಬೀಸಿದರು.