'ಬಿಜೆಪಿ ಅಧಿಕಾರಕ್ಕೆ ಬಂದರೂ ನೀವು ಸಿಎಂ ಆಗಲ್ಲ, ನಿಮ್ಮ ನಾಯಕರು ಯಾರು ಸ್ವಾಮಿ': ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ವಾಗ್ವಾದ
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಇಂದು ಶುಕ್ರವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ, ಬಿಸಿಬಿಸಿ ಚರ್ಚೆಗೆ ವೇದಿಕೆಯಾಯಿತು. ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಿಎಂ ಆಗುವ ಬಗ್ಗೆ ಮಾತಿಗೆ ತಿರುಗೇಟು ನೀಡಿದರು.
Published: 11th March 2022 01:42 PM | Last Updated: 11th March 2022 03:29 PM | A+A A-

ಸಿದ್ದರಾಮಯ್ಯ-ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಇಂದು ಶುಕ್ರವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ, ಬಿಸಿಬಿಸಿ ಚರ್ಚೆಗೆ ವೇದಿಕೆಯಾಯಿತು. ಮಾಜಿ ಮುಖ್ಯಮಂತ್ರಿಗಳಾದ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಿಎಂ ಆಗುವ ಬಗ್ಗೆ ಮಾತಿಗೆ ತಿರುಗೇಟು ನೀಡಿದರು. ಸದನ ಸದಸ್ಯರು ಕುಳಿತುಕೊಂಡು ಕುತೂಹಲದಿಂದ ಕೇಳಿಸಿಕೊಂಡರು.
ವಿಧಾನಸಭೆಯಲ್ಲಿ ಮಾತಿಗೆ ಆರಂಭಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿರೋಧ ಪಕ್ಷದವರು ಭ್ರಮೆಯಿಂದ ಹೇಳುತ್ತಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ, ನಮ್ಮ ರಾಜ್ಯದಲ್ಲಿ ಕೂಡ ಬಿಜೆಪಿ ಪರ ಜನರ ಒಲವು ಇದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕನಿಷ್ಠ 130-135 ಸೀಟು ಗೆದ್ದು ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಸಾಮೂಹಿಕವಾಗಿ ನಾವು ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಇದಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಗೆ ನಾಯಕತ್ವವೇ ಇಲ್ಲ ಎಂಬ ಪರಿಸ್ಥಿತಿಯಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮತ್ತು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಇದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಕೆರಳಿಸಿತು. ಅವರು ಎದ್ದುನಿಂತು ಮಾತನಾಡಿ, ಯಡಿಯೂರಪ್ಪನವರನ್ನು ಬಿಜೆಪಿ ವರಿಷ್ಠರು ಅನಗತ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಬೊಮ್ಮಾಯಿಯವರನ್ನು ಕೂರಿಸಿದರು. ಈ ನಿರ್ಧಾರ, ಬೆಳವಣಿಗೆ ಬಿಜೆಪಿಯಲ್ಲಿ ಬೇಕಾಗಿರಲಿಲ್ಲ. ಇಂದು ಯಡಿಯೂರಪ್ಪನವರು ಬಹಳ ನೋವಿನಿಂದ ವ್ಯಂಗ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಭಾವಿಸಿದ್ದೇನೆ. ಅವರು ರಾಜೀನಾಮೆ ನೀಡಿದಾಗ ಕಣ್ಣೀರು ಹಾಕಿದರು. ಕಣ್ಣೀರು ಸುಮ್ಮನೆ ಬರುತ್ತದೆಯೇ, ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು 2018ರಲ್ಲಿ ಕೂಡ ಯಡಿಯೂರಪ್ಪ ಹೇಳಿದ್ದರು. 150 ಸೀಟು ಗೆಲ್ಲಿಸುತ್ತೇನೆ ಎಂದಿದ್ದರು.
ಆದರೆ 2018ರಲ್ಲಿ ರಾಜ್ಯದ ಜನರು ಆಶೀರ್ವಾದ ಕೊಡಲಿಲ್ಲ. ವಾಜಪೇಯಿಯವರು ಇಂಡಿಯಾ ಈಸ್ ಶೈನಿಂಗ್ ಎಂದು ಹೇಳಿದ್ದರು. ಆದರೆ ಅವರಿಗೆ ಎರಡನೇ ಸಾರಿ ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಾಗಲಿಲ್ಲ. ಈಗ ನೀವು 130 ಸೀಟುಗಳನ್ನು ಗೆಲ್ಲುವ ಭ್ರಮೆಯಲ್ಲಿದ್ದೀರಿ, ನೀವು ಜನರ ಬಳಿ ಇತ್ತೀಚೆಗೆ ಹೋಗಿಲ್ಲ ಎಂದು ಕಾಣುತ್ತದೆ. ನಿಮ್ಮ ಸರ್ಕಾರ ಬಂದ ಮೇಲೆ ಅನೇಕ ಚುನಾವಣೆಗಳಾಗಿವೆ, ಅದರಲ್ಲಿ ನಿಮ್ಮ ಪರಿಸ್ಥಿತಿಯೇನು, ಕಾಂಗ್ರೆಸ್ ಮೊದಲ ಸ್ಥಾನದಲ್ಲಿ, ಬಿಜೆಪಿ ಎರಡನೇ ಸ್ಥಾನದಲ್ಲಿದೆ, ರಾಜ್ಯದ ಜನತೆ ನಿಮ್ಮನ್ನು ಹೊರಗೆ ಹಾಕಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದು ಲೇವಡಿಯಿಂದ ತಿರುಗೇಟು ನೀಡಿದರು.
ಅಧಿಕಾರಕ್ಕೆ ಬರುವ ಬಿಜೆಪಿ, ಯಡಿಯೂರಪ್ಪನರ ಕನಸು ನನಸಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಯಡಿಯೂರಪ್ಪ, ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ರಾಜೀನಾಮೆ ನೀಡಿದ್ದು ಹೊರತು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿದ್ದು ಅಲ್ಲ, ಬಸವರಾಜ ಬೊಮ್ಮಾಯಿಯವರು ಮಂಡನೆ ಮಾಡಿದ ಬಜೆಟ್ ಹಿಡಿದುಕೊಂಡು ನಾವು ರಾಜ್ಯಾದ್ಯಂತ ಓಡಾಡಿ ಜನರ ಬಳಿ ಮತ ಕೇಳುತ್ತೇವೆ. ನೀವೂ ಬನ್ನಿ, ಪ್ರವಾಸ ಮಾಡಿ, ನೀವು ಬರುವ ದಿನಗಳಲ್ಲಿ ಶಾಶ್ವತವಾಗಿ ಆಡಳಿತ ಪಕ್ಷದ ಸೀಟಿಗೆ ಬರುವುದಕ್ಕಾಗುವುದಿಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರಬೇಕಾಗುತ್ತದೆ ಎಂದರು.
ಮುಂದಿನ ಬಾರಿ ಕೂಡ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಂಡರೆ ಕಾಂಗ್ರೆಸ್ ಧೂಳೀಪಟವಾಗುತ್ತದಲ್ಲ ಎಂಬ ನೋವು ನನಗಿದೆ. ನಿಮಗಿದೆಯೊ ಇಲ್ಲವೋ ಗೊತ್ತಿಲ್ಲ, ರಾಷ್ಟ್ರಮಟ್ಟದಲ್ಲಿ ನಿಮ್ಮ ಪಕ್ಷಕ್ಕೆ ನಾಯಕರು ಯಾರು ಎಂದು ವ್ಯಂಗ್ಯವಾಡಿದರು.
ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡು ನೋಡಿದ್ದೇನೆ, ರಾಜೀನಾಮೆ ಕೊಟ್ಟಾಗಿದೆ. ಇನ್ನೊಂದು ಬಾರಿ ಆಗುವ ಪ್ರಶ್ನೆಯಿಲ್ಲ, ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.