ಕಾಂಗ್ರೆಸ್ ನಲ್ಲಿ ಇರುವುದು ಗೊಡ್ಡು ಎಮ್ಮೆಗಳು, ಸಿದ್ದರಾಮಯ್ಯರನ್ನು ನಂಬಿ ಕೆಟ್ಟೆ: ಸಿ.ಎಂ.ಇಬ್ರಾಹಿಂ
ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯುವ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
Published: 12th March 2022 07:52 PM | Last Updated: 12th March 2022 07:52 PM | A+A A-

ಸಿಎಂ ಇಬ್ರಾಹಿಂ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯುವ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸಿದ್ಧರಾಮಯ್ಯರ ಸಾಫ್ಟ್ ಕಾರ್ನರ್ನಿಂದ ಯಡಿಯೂರಪ್ಪರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಸಿದ್ಧರಾಮಯ್ಯ ನಮ್ಮ ಮನೆಗೆ ಯಾವಾಗ ಬರುತ್ತಾರೋ, ಬರಲಿ….. ಇಂದು ಕೂಡ ಬಿರಿಯಾನಿ ತಿನ್ನೋಕೆ ಬರಲಿ. ಬೊಮ್ಮಾಯಿ ಕೂಡ ನಮ್ಮ ಸ್ನೇಹಿತರು. ನಾನು ಜೆಡಿಎಸ್ನಲ್ಲಿದ್ದಾಗ ಬೊಮ್ಮಾಯಿ ಅವರೇ ನನ್ನ ಮನೆಗೆ ಬರುತ್ತಿದ್ರು. ನನ್ನನ್ನು ಕರೆದುಕೊಂಡು ಹೋಗುತ್ತಿದ್ರು. ಅವರು ಬರಲಿ, ಬಿರಿಯಾನಿ ತಿನ್ನಲಿ ಎಂದರು.
ಇದನ್ನು ಓದಿ: ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಇಬ್ರಾಹಿಂ ಅಧಿಕೃತ ಗುಡ್ ಬೈ: ಸೋನಿಯಾಗೆ ರಾಜಿನಾಮೆ ಪತ್ರ ರವಾನೆ!
ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿ.ಎಂ.ಇಬ್ರಾಹಿಂ, ಬಜೆಟ್ನಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ. ಸಿದ್ಧರಾಮಯ್ಯರ ಬಜೆಟ್ನಲ್ಲಿ ನಮಗೇನು ಸಿಕ್ಕಿಲ್ಲ. ಆದರೆ ಬೊಮ್ಮಾಯಿ ಈಗ ಕೊಟ್ಟಿದ್ದಾರೆ. ಅವರಿಗೆ ನಿಮ್ಮ ಕೊಡುಗೆ ಏನು? ನಮ್ಮ ಬಂಡವಾಳ ಇಲ್ಲದೇ, ಬೋನಸ್ ಹೇಗೆ ನಿರೀಕ್ಷೆ ಮಾಡುವುದು? ನಾನು ಪ್ಲಾನಿಂಗ್ ಕಮಿಷನ್ನಲ್ಲಿ ಉಪಾಧ್ಯಕ್ಷ ಇದ್ದಾಗ ಕೊಟ್ಟ ವರದಿ ಇಟ್ಟಿಲ್ಲ. ಬೊಮ್ಮಾಯಿಗೆ ಈಗ ಹೇಳುತ್ತೇನೆ ವರದಿ ನೋಡಿ ಅಂತ. ಸಿದ್ಧರಾಮಯ್ಯರನ್ನು ಕೇಳಿ, ಅವರು ಕಾಂಗ್ರೆಸ್ನಲ್ಲಿ ಎಸಿ ರೂಮ್ನಲ್ಲಿದ್ದಾರೋ, ಟೆಂಪರೇಚರ್ ರೂಮಿನಲ್ಲಿದ್ದಾರೋ? 50 ಡಿಗ್ರಿ ಟೆಂಪರೇಚರ್ನಲ್ಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಇಬ್ರಾಹಿಂ ಭವಿಷ್ಯ ನುಡಿದರು.
ದೇವೇಗೌಡ್ರು 4% ರಷ್ಟು ಮೀಸಲಾತಿ ಕೊಟ್ರು, ಕಾಂಗ್ರೆಸ್ನವರು ನಮಗೆ ಚೆನ್ನಾಗಿ ಮೇಕಪ್ ಮಾಡಿ, ಬಸ್ ಸ್ಟ್ಯಾಂಡ್ನಲ್ಲಿ ನಿಲ್ಲಿಸಿದ್ರು. ಹೋಗುವವರನ್ನು, ಬರುವವರನ್ನು ಕರೆಯುವ ಕೆಲಸ ಮಾಡಿದ್ರು. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ನ ಶಾಸಕ ಆದರೂ ಯಡಿಯೂರಪ್ಪರನ್ನು ಬದಲಿಸಬೇಡಿ ಅಂತಾರೆ. ಅವರು ಯಾವ ಪಕ್ಷದ ಶಾಸಕರು? ನಾನು ಇದನ್ನು ಕೇಳಿದ್ದಕ್ಕೆ ಉಗ್ರಪ್ಪನ ಕೈಯಲ್ಲಿ ಬೈಯಿಸಿದ್ರು. ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಈಗ ಖಾದರ್ಗೆ ಚಡ್ಡಿ ಕೊಟ್ಟಿದ್ದಾರೆ. ಕಲ್ಕಡ ಪ್ರಭಾಕರ್ ಭಟ್ರನ್ನು ಎದುರಿಸಲು ಆಯ್ತಾ? ಒಕ್ಕಲಿಗರು, ಸಾಬರು ಸೇರಿದ್ರೆ 65 ಸೀಟು ಬರುತ್ತದೆ. ಸಾಬರು, ಲಿಂಗಾಯತರು ಸೇರಿದ್ರೆ 110 ಸೀಟು ಬರುತ್ತದೆ. ಇದು ಸಿದ್ಧರಾಮಯ್ಯರಿಗೂ ಗೊತ್ತಿದೆ. ಕಾಂಗ್ರೆಸ್ನಲ್ಲಿ ಇರುವುದು ಗೊಡ್ಡು ಎಮ್ಮೆಗಳು. ಯಾವ ಹಸು ಇದೆ ಓಟು ತರುವುದಕ್ಕೆ? ಕಾಂಗ್ರೆಸ್ನವರು ನನ್ನನ್ನು ತಳ್ಳಿದ್ದು ಆಯ್ತು. ಈಗ ನಾವು ಹೊರಗೆ ಹೋಗುತ್ತಿದ್ದೇವೆ. ಸಿದ್ಧರಾಮಯ್ಯರನ್ನು ನಂಬಿ ಕಾಂಗ್ರೆಸ್ಗೆ ಸೇರಿದೆ. ನನ್ನನ್ನು ನಡು ನೀರಲ್ಲಿ ಕೈ ಬಿಟ್ರು ಎಂದು ಆರೋಪಿಸಿದ ಅವರು, ಟೆಂಟ್ಗೆ ಬೆಂಕಿ ಬಿದ್ದಿದೆ… ಎಲ್ಲರೂ ಗೇಟು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ವಸ್ತು ಸ್ಥಿತಿಯ ಬಗ್ಗೆ ಇಬ್ರಾಹಿಂ ಬೇಸರ ಹೊರ ಹಾಕಿದರು.