ಪ್ರತಿ ರಾಜ್ಯವೂ ವಿಭಿನ್ನವಾಗಿದ್ದು, ಕರ್ನಾಟಕದ ಪ್ರತಿ ಕ್ಷೇತ್ರದ ಪ್ರಚಾರಕ್ಕೂ ಬಿಜೆಪಿ ತಂತ್ರ ಹೊಂದಿದೆ: ಸಿ.ಟಿ.ರವಿ
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂಚ ರಾಜ್ಯ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಕೇಂದ್ರ ನಾಯಕತ್ವ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
Published: 13th March 2022 11:03 AM | Last Updated: 13th March 2022 12:23 PM | A+A A-

ಸಿಟಿ ರವಿ
ಬೆಂಗಳೂರು: ತೀವ್ರ ಪೈಪೋಟಿಯಿಂದ ಕೂಡಿದ್ದ ಪಂಚ ರಾಜ್ಯ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಕೇಂದ್ರ ನಾಯಕತ್ವ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಪ್ರತಿ ರಾಜ್ಯದ ರಾಜಕೀಯ ಪರಿಸ್ಥಿತಿಗಳು ವಿಭಿನ್ನವಾಗಿರಲಿದ್ದು, ಕರ್ನಾಟಕದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದೊಂದು ತಂತ್ರವನ್ನು ರೂಪಿಸಲಾಗಿದ್ದು, ಅದನ್ನು ಕಾರ್ಯಗತಗೊಳಿಸಲಾಗುತ್ತದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳ ಕುರಿತು ಮಾತನಾಡಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ?
ಈ ಫಲಿತಾಂಶಗಳ ಆಧಾರದ ಮೇಲೆ ನಾವು ಕರ್ನಾಟಕ ಚುನಾವಣೆಯಲ್ಲಿ ಶೇ.100 ರಷ್ಟು ಗೆಲುವು ಸಾಧಿಸುತ್ತೇವೆಂಬ ಹೇಳಿಕೆ ಉತ್ಸಾಹದಿಂದ ನೀಡುತ್ತಿರುವ ಹೇಳಿಕೆಯಷ್ಟೇ. ಪ್ರತಿ ರಾಜ್ಯದ ರಾಜಕೀಯ ಪರಿಸ್ಥಿತಿಯೂ ವಿಭಿನ್ನವಾಗಿರುತ್ತದೆ. ಸಮಯಕ್ಕೆ ತಕ್ಕಂತೆ ವಿಭಿನ್ನವಾಗಿರುತ್ತದೆ. ಆರು ತಿಂಗಳ ನಂತರ ಇಂದಿನ ಪರಿಸ್ಥಿತಿ ಬದಲಾಗಬಹುದು. ಕರ್ನಾಟಕದಲ್ಲಿ ಮತ್ತು ದೇಶದಾದ್ಯಂತ ನಮಗಿರುವ ಅನುಭವದೊಂದಿಗೆ ನಾವು ಕರ್ನಾಟಕದ ಚುನಾವಣಾ ಕುರಿತು ತಂತ್ರಗಳ ರೂಪಿಸುತ್ತೇವೆ.
ಪ್ರತೀ ರಾಜ್ಯಕ್ಕೂ ನಿರ್ದಿಷ್ಟ ತಂತ್ರವನ್ನು ಹೊಂದಿದ್ದೀರಾ?
ಹೌದು, ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಕಾರ್ಯತಂತ್ರ ರೂಪಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರುತ್ತೇವೆ.
ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಲಾಭವಾದ ಪ್ರಮುಖ ಅಂಶಗಳು ಯಾವುವು?
ನಾವು ಯಾವಾಗಲೂ ನಾಲ್ಕು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ - ಸಂಘಟನೆ, ಬಲವಾದ ನಾಯಕತ್ವ, ಅಭಿವೃದ್ಧಿ ಕಾರ್ಯಗಳು ಮತ್ತು ಚುನಾವಣಾ ನಿರ್ವಹಣೆ. ಸಂಘಟನೆಯನ್ನು ಬಲಪಡಿಸುವುದು ಪ್ರತಿ 30 ಮತದಾರರಿಗೆ ಒಬ್ಬ ವ್ಯಕ್ತಿಯನ್ನು ಉಸ್ತುವಾರಿ ಮಾಡಲು 'ಪೇಜ್ ಪ್ರಮುಖ್' ಅನ್ನು ನೇಮಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಒಳಗೊಂಡಿದೆ ಮತ್ತು ನಾವು ಬೂತ್ ಮಟ್ಟದಿಂದ ನಾಯಕತ್ವವನ್ನು ಪ್ರೋತ್ಸಾಹಿಸುತ್ತೇವೆ. ನಾಯಕತ್ವ ಎನ್ನುವುದು ಹುದ್ದೆ ಅಥವಾ ಸ್ಥಾನದಿಂದ ಬರುವುದಿಲ್ಲ, ಜನರಿಗಾಗಿ ಹೋರಾಡುವ ಮತ್ತು ಅವರ ಸೇವೆ ಮಾಡುವ ಮೂಲಕ ಬರುತ್ತದೆ. ಕೇಂದ್ರ ಮಟ್ಟದಲ್ಲಿ ಮತ್ತು ರಾಜ್ಯಗಳಲ್ಲಿ ನಮಗೆ ಬಲಿಷ್ಠ ನಾಯಕತ್ವವಿದೆ. ನಮಗೆ ಕೆಲಸ ಮಾಡಿದ ಮೂರನೇ ಅಂಶವೆಂದರೆ ನಮ್ಮ ಸರ್ಕಾರಗಳು ಮಾಡಿದ ಒಳ್ಳೆಯ ಕೆಲಸಗಳು. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಗರೀಬ್ ಕಲ್ಯಾಣ್ ಅನ್ನ ಯೋಜನೆ. ಈ ಬಗ್ಗೆ ಜನರಿಂದ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಗೋವಾದಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸಕಾರಾತ್ಮಕ ವಾತಾವರಣ ಸೃಷ್ಟಿಸಿವೆ. ಆ ಅಂಶಗಳ ಜೊತೆಗೆ, ಸರಿಯಾದ ವ್ಯಕ್ತಿಗಳಿಗೆ ಟಿಕೆಟ್ ಮತ್ತು ಜವಾಬ್ದಾರಿಗಳನ್ನು ನೀಡುವ ವಿಚಾರದಲ್ಲಿ ಚುನಾವಣಾ ನಿರ್ವಹಣೆ ಮತ್ತು ಜಾತಿ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ. ಈ ಎಲ್ಲಾ ನಾಲ್ಕು ಅಂಶಗಳು ನಮಗೆ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡಿದವು. ಇದರಲ್ಲಿ ಯಾವುದೇ ಅಂಶ ಕಡಿಮೆಯಾಗಿದ್ದರೂ ಕಷ್ಟಕರವಾಗುತ್ತಿತ್ತು.
ಕರ್ನಾಟಕದಲ್ಲಿ ಪಕ್ಷದ ಶಕ್ತಿ-ದೌರ್ಬಲ್ಯಗಳ ಬಗ್ಗೆ ಈ ಹಿಂದೆಯೇ ಹೇಳಿದ್ದಿರಿ. ಇದನ್ನು ವಿವರಿಸಬಹುದೇ?
ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು ಎಂಬುದು ನಮಗೆ ತಿಳಿದಿದೆ ಮತ್ತು ಪಕ್ಷದ ಸೂಕ್ತ ವೇದಿಕೆಯಲ್ಲಿ ಅವುಗಳ ಕುರಿತು ಚರ್ಚಿಸುತ್ತೇವೆ.
ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಘಟಕದಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆಂಬ ಊಹಾಪೋಹಗಳು ಶುರುವಾಗಿದೆ. ಇದು ನಿಜವೇ?
ಈ ಕುರಿತ ಪ್ರಶ್ನೆಗೆ 'ಹೌದು' ಅಥವಾ 'ಇಲ್ಲ' ಎಂದು ಹೇಳಲಾರೆ. ಪಕ್ಷದಲ್ಲಿ ನನಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಕೊಟ್ಟಕೆ ಅದು ಶಾಶ್ವತವಾಗಿರುವುದಿಲ್ಲ. ಗೋವಾ, ಮಹಾರಾಷ್ಟ್ರ ಮತ್ತು ತಮಿಳುನಾಡು ಉಸ್ತುವಾರಿ ನೀಡುದರೂ ಅದು ಶಾಶ್ವತವಲ್ಲ. ನನ್ನನ್ನು ಬೇರೆ ರಾಜ್ಯಕ್ಕೆ ಕಳುಹಿಸಬಹುದು, ಇನ್ನೊಂದು ಕೆಲಸವನ್ನು ನೀಡಬಹುದು. ಯಾವುದೂ ಶಾಶ್ವತವಲ್ಲ. ನಾವೆಲ್ಲರೂ ಪಕ್ಷದ ಕಾರ್ಯಕರ್ತರು ಎಂಬುದಷ್ಟೇ ಶಾಶ್ವತ.
ಇತರ ಹಲವು ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ, ವಿಶೇಷವಾಗಿ ಅದರ ಸಂಘಟನೆ ಮತ್ತು ರಾಜ್ಯದಾದ್ಯಂತ ಅದರ ಅಸ್ತಿತ್ವದ ದೃಷ್ಟಿಯಿಂದ ನೋಡಿದರೆ ಪ್ರಬಲವಾಗಿದೆ. ನೀವು ಅದನ್ನು ಹೇಗೆ ನೋಡುತ್ತೀರಿ?
ನಾವು ಯಾವುದನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ನಾವು ಯಾರನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಾವು ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕು.
ಪಂಚ ರಾಜ್ಯಗಳ ಚುನಾವಣೆ ಬಳಿಕ ಕೇಂದ್ರ ನಾಯಕತ್ವದ ಗಮನ ಇದೀಗ ಕರ್ನಾಟಕದತ್ತ ಹೊರಳಲಿದೆಯೇ?
ಹೌದು, ಅದು ಸ್ವಾಭಾವಿಕ. ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸುತ್ತೇವೆ ಮತ್ತು ಚುನಾವಣೆಗಳಿಗೆ ವಿಶೇಷ ಗಮನ ನೀಡುತ್ತೇವೆ.
ಈ ವರ್ಷಾಂತ್ಯದಲ್ಲಿ ಗುಜರಾತ್ ಚುನಾವಣೆ ಜೊತೆಗೆ ಕರ್ನಾಟಕದಲ್ಲೂ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಇದೆಯೇ?
ಕರ್ನಾಟಕದಲ್ಲಿ ಅದರ ಅವಶ್ಯಕತೆ ಇಲ್ಲ. ದೇಶಾದ್ಯಂತ ಒಂದೇ ಬಾರಿಗೆ ಚುನಾವಣೆ ನಡೆದರೆ ಬೇರೆ ಮಾತು. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಗುಜರಾತ್ ಅಥವಾ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.
ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕದಲ್ಲಿ ಚುನಾವಣೆ ಎದುರಿಸಲು ಮುಂದಾಗಿದೆ ಎಂಬ ಆರೋಪಗಳು ಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ನಾವು ಯಾವಾಗಲೂ ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಗೋವಾ ಮತ್ತು ಮಣಿಪುರದಲ್ಲಿ ನಾವು ಅಭಿವೃದ್ಧಿ ವಿಷಯಗಳ ಬಗ್ಗೆ ಮಾತ್ರ ಮಾತನಾಡಿದ್ದೆನೇ ಹೊರತು ಯಾವುದೇ ಧಾರ್ಮಿಕ ವಿಚಾರಗಳ ಬಗ್ಗೆಯಲ್ಲ. ಯುಪಿಯಲ್ಲಿ ನಾವು ಗರೀಬ್ ಕಲ್ಯಾಣ್, ಕಾನೂನು ಮತ್ತು ಸುವ್ಯವಸ್ಥೆ, ಹಸಿರು ಕಾರಿಡಾರ್ ಬಗ್ಗೆ ಮಾತನಾಡಿದ್ದೆವು. ಆದರೆ ಸಮಾಜವಾದಿ ಪಕ್ಷವು ಜಿನ್ನಾ ವಿಷಯವನ್ನು ಪ್ರಸ್ತಾಪಿಸಿತ್ತು. ನಾವು ಯಾವಾಗಲೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೇವೆಂದು ಹೇಳಿದ್ದಾರೆ.