ಕಾಂಗ್ರೆಸ್ ಗೆ ಸಿಎಂ ಇಬ್ರಾಹಿಂ ಗುಡ್ ಬೈ: ಪಕ್ಷ ತೊರೆಯದಂತೆ ಕೈ ನಾಯಕರ ಸಂಧಾನ ಸರ್ಕಸ್!
ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ತೊರೆದಿರುವುದಾಗಿ ಘೋಷಣೆ ಮಾಡಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದರು.
Published: 17th March 2022 11:46 AM | Last Updated: 17th March 2022 01:27 PM | A+A A-

ಇಬ್ರಾಹಿಂ ಭೇಟಿ ಮಾಡಿದ ಜಮೀರ್ ಅಹ್ಮದ್
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ತೊರೆದಿರುವುದಾಗಿ ಘೋಷಣೆ ಮಾಡಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಈ ಬೆಳವಣೆಗೆ ಮಧ್ಯೆ ಕಾಂಗ್ರೆಸ್ ನಾಯಕರು ಸಿ ಎಂ ಇಬ್ರಾಹಿಂ ಅವರನ್ನು ಮನವೊಲಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಇಬ್ರಾಹಿಂ ಅವರನ್ನು ಪಕ್ಷದಲ್ಲಿಯೇ ಮುಂದುವರೆಯುವಂತೆ ಜಮೀರ್ ಮನವೊಲಿಕೆ ಪ್ರಯತ್ನ ನಡೆಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಇಬ್ರಾಹಿಂ ಅವರ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ಇರುವುದು ಗೊಡ್ಡು ಎಮ್ಮೆಗಳು, ಸಿದ್ದರಾಮಯ್ಯರನ್ನು ನಂಬಿ ಕೆಟ್ಟೆ: ಸಿ.ಎಂ.ಇಬ್ರಾಹಿಂ
ಬದಲಾದ ರಾಜಕೀಯ ಪರಿಸ್ಥಿತಿಗಳು ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಈ ಹಿಂದೆ ಇಬ್ರಾಹಿಂ ತಿಳಿಸಿದ್ದರು. ಇದಾದ ಬಳಿಕ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ನಡುವೆ ಜೆಡಿಎಸ್ ಗೆ ಹೋಗಬೇಕೋ. ಇಲ್ಲವೇ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆಯೇ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಅವರೂ ಇಬ್ರಾಹಿಂ ಭೇಟಿ ಮಾಡಿ ಮಾತನಾಡಿರುವುದು ಕುತೂಹಲಕ್ಕೆ ಮತ್ತಷ್ಟು ಎಡೆ ಮಾಡಿ ಕೊಟ್ಟಿದೆ.
ಈ ನಡುವೆ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಖಾನ್ ಅವರು ಸಿಎಂ ಇಬ್ರಾಹಿಂ ಜೊತೆ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಮತ್ತೋರ್ವ ಆಪ್ತ ಎಚ್ ಸಿ ಮಹಾದೇವಪ್ಪ ಕೂಡಾ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಸಂಧಾನ ಪ್ರಯತ್ನ ನಡೆಸಿದ್ದರು. ಸಿಎಂ ಇಬ್ರಾಹಿಂ ಅವರನ್ನು ಒಲಿಸಿಕೊಳ್ಳಲು ಸಿದ್ದರಾಮಯ್ಯ ಅವರ ಕೊನೆಯ ಹಂತದ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಆಗಲಿದೆ ಎಂಬುದು ಕಾದು ನೋಡಬೇಕಿದೆ.