2023 ವಿಧಾನಸಭೆ ಚುನಾವಣೆ: ಸಚಿವ ಸಂಪುಟಕ್ಕೆ ಸರ್ಜರಿ, ಪಕ್ಷ ಸಂಘಟನೆಗೆ ಬಿಜೆಪಿ ಮುಂದು
ಇತ್ತೀಚೆಗೆ ಮುಗಿದ ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಮುಂದಿನ ವರ್ಷ ಬೇಸಿಗೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಹೈಕಮಾಂಡ್ ಮುಂದಾಗಿದ್ದು,
Published: 21st March 2022 08:53 AM | Last Updated: 21st March 2022 01:36 PM | A+A A-

ವಿಧಾನಸೌಧ
ಬೆಂಗಳೂರು: ಇತ್ತೀಚೆಗೆ ಮುಗಿದ ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಮುಂದಿನ ವರ್ಷ ಬೇಸಿಗೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಹೈಕಮಾಂಡ್ ಮುಂದಾಗಿದ್ದು, ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಪುನರ್ರಚನೆಯೂ ಸೇರಿದ್ದು ಮುಂದಿನ ವಿಧಾನಸಭೆ ಚುನಾವಣೆಗೆ ತಳಮಟ್ಟದಲ್ಲಿ ಬದಲಾವಣೆ ತರಲು ಮುಂದಾಗಿದೆ.
ಸಚಿವ ಸಂಪುಟ ಪುನರ್ರಚನೆ: ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಪುನರ್ರಚನೆಯಲ್ಲಿ ಕನಿಷ್ಠ 10 ಮಂದಿ ಸಚಿವರು ರಾಜೀನಾಮೆ ಕೊಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಯಿದೆ. ಹಳಬರು ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಬಹುದು. ವಯಸ್ಸು ಸೇರಿದಂತೆ ಹಲವು ವಿಚಾರಗಳಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸದಿರುವವರು ತಮ್ಮ ಮಕ್ಕಳನ್ನು ಸಕ್ರಿಯ ರಾಜಕಾರಣಕ್ಕೆ ತರಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬಾರಿ ಸಂಪುಟಕ್ಕೆ ರಾಜು ಗೌಡ, ಪಿ ರಾಜೀವ್, ಅರವಿಂದ್ ಬೆಲ್ಲದ್, ಎಂ ಪಿ ರೇಣುಕಾಚಾರ್ಯ, ದತ್ತಾತ್ರೇಯ ಸಿ ಪಾಟೀಲ್ ರೇವೂರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೆ ಅಚ್ಚರಿಯಿಲ್ಲ.
ಇದನ್ನೂ ಓದಿ: ಮೇಕೆದಾಟು ಯೋಜನೆ: ಅಗತ್ಯ ಬಿದ್ದರೆ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ - ಸಿಎಂ ಬೊಮ್ಮಾಯಿ
ಈ ಮಧ್ಯೆ, ತಮ್ಮ ಸೋದರ ರಮೇಶ್ ಜಾರಕಿಹೊಳಿ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ, ಅವರು ಎದುರಿಸುತ್ತಿರುವ ಆರೋಪದಿಂದ ಸಂಪೂರ್ಣ ಮುಕ್ತರಾಗಿ ಗೆದ್ದುಬಂದು ಸಂಪುಟಕ್ಕೆ ಶೀಘ್ರ ಸೇರ್ಪಡೆಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೆಎಂಎಫ್ ಅಧ್ಯಕ್ಷ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಸಿಡಿ ಕೇಸಿಗೆ ಸಂಬಂಧಪಟ್ಟಂತೆ ಎಲ್ಲಾ ಕೋರ್ಟ್ ವಿಚಾರಣೆಗಳಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಸಂಪೂರ್ಣ ಆರೋಪ ಮುಕ್ತವಾಗಿ ಹೊರಬಂದ ಮೇಲೆ ಸಚಿವ ಸ್ಥಾನ ನೀಡಲಾಗುವುದು ಎಂದು ಪಕ್ಷ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಆತನಿಗೆ ಒಳ್ಳೆಯದಾಗಲಿದೆ ಎಂದು ಭಾವಿಸುತ್ತೇನೆ. ಏಪ್ರಿಲ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಇನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿರುವ ರೇಣುಕಾಚಾರ್ಯ, ಏಪ್ರಿಲ್ 10ರೊಳಗೆ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ನಡೆಯಲಿದೆ. ಇತ್ತೀಚೆಗೆ ಕರ್ನಾಟಕಕ್ಕೆ ಕೇಂದ್ರ ತಂಡವೊಂದು ಭೇಟಿ ನೀಡಿದ್ದು ಇಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡುತ್ತಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ನಡೆಯಲಿದೆ ಎಂದರು.
ಸದ್ಯದಲ್ಲಿಯೇ ಸಿಎಂ ದೆಹಲಿಗೆ: ವಿಧಾನಸಭೆ ಕಲಾಪದಲ್ಲಿ ಅಂತರಾಜ್ಯ ಜಲವಿವಾದ ಚರ್ಚಿಸಿದ ನಂತರ ಸಿಎಂ ಬೊಮ್ಮಾಯಿಯವರು ಸದ್ಯದಲ್ಲಿಯೇ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಸಂಪುಟ ಪುನರ್ರಚನೆ ಬಗ್ಗೆ ಚರ್ಚೆಗೆ ಬರುವ ಸಾಧ್ಯತೆಯಿದೆ.
ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರುಗಳಿಗೆ ಹಲವು ಗುರುತರ ಜವಾಬ್ದಾರಿಗಳಿರುತ್ತವೆ. ಬೊಮ್ಮಾಯಿಯವರು ಬಜೆಟ್ ನಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತರುವುದು, ರಾಜ್ಯಕ್ಕೆ ಅಭಿವೃದ್ಧಿಶೀಲ ಯೋಜನೆಗಳನ್ನು ಚುನಾವಣೆ ಮುನ್ನ ತರುವುದು, ಸರ್ಕಾರ ವಿರುದ್ಧ ಆಡಳಿತ ವಿರೋಧಿ ಅಭಿಪ್ರಾಯ ಜನರಲ್ಲಿ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿಯಿದೆ.