ಜಾತ್ರೆಯಲ್ಲಿ ಮುಸ್ಲಿಮರಿಗೆ ನಿಷೇಧಕ್ಕೆ ಬಿಜೆಪಿ ಕುಮ್ಮಕ್ಕು; ಸರ್ಕಾರ ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು ಟಿ ಖಾದರ್
ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ನಿಷೇಧ ಹೇರಿರುವುದಕ್ಕೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಯು ಟಿ ಖಾದರ್ ಆರೋಪಿಸಿದ್ದಾರೆ.
Published: 23rd March 2022 12:25 PM | Last Updated: 23rd March 2022 01:14 PM | A+A A-

ಯು.ಟಿ ಖಾದರ್
ಬೆಂಗಳೂರು: ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ನಿಷೇಧ ಹೇರಿರುವುದಕ್ಕೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಯು ಟಿ ಖಾದರ್ ಆರೋಪಿಸಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳ ವಿರೋಧ ವಿಚಾರ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಭಾರತ ವಿವಿಧತೆಯಲ್ಲಿ ಏಕತೆ ಹೊಂದರುವ ದೇಶ. ಇಲ್ಲಿ ಎಲ್ಲಾ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಧರ್ಮಗಳ ನಡುವೆ ಕಂದಕವನ್ನ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.
ಕರಾವಳಿ ಭಾಗದಲ್ಲಿ ಕೆಲ ಹಿತಾಸಕ್ತಿಗಳು ಭಿತ್ತಿ ಪತ್ರಗಳನ್ನ ಹಾಕುತ್ತಿವೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ. ಮುಲ್ಕಿ ಸೇರಿದಂತೆ ಕೆಲವೆಡೆ ಭಿತ್ತಿ ಪತ್ರಗಳನ್ನ ಹಾಕಲಾಗಿದೆ. ಇದೊಂದು ಅಸಹ್ಯಕರ ಕೃತ್ಯ ಎಂದ ಖಾದರ್, ಇದಕ್ಕೆ ಹಿಂದೂ ಸಹೋದರರು ಬೆಂಬಲ ಕೊಡಬಾರದು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಈ ವಿಚಾರವಾಗಿ ಮೌನವಾಗಿದೆ. ಒಳಗೊಳಗೆ ಖುಷಿ ಪಡುತ್ತಿದೆಯಾ ಎಂದು ಪ್ರಶ್ನೆ ಮಾಡಿದ ಅವರು, ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು.ಟಿ ಖಾದರ್ ಆರೋಪ ಮಾಡಿದರು.