ನಕಲಿ ಜಾತಿ ಪ್ರಮಾಣಪತ್ರ: ನಾನು ಗಲ್ಲಿಗೇರಲು ಸಿದ್ಧ ಎಂದ ಶಾಸಕ ರೇಣುಕಾಚಾರ್ಯ
ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಗಂಭೀರ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನಕಲಿ ಜಾತಿ ಪ್ರಮಾಣ ಪತ್ರ...
Published: 23rd March 2022 03:46 PM | Last Updated: 23rd March 2022 03:51 PM | A+A A-

ಎಂ ಪಿ ರೇಣುಕಾಚಾರ್ಯ
ಬೆಂಗಳೂರು: ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಗಂಭೀರ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರೋ ಆರೋಪವೂ ಪ್ರಸ್ತಾಪವಾಯಿತು.
ಶೂನ್ಯ ವೇಳೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ ‘ನೀವು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದೀರಿ’ ಎಂದು ಯು.ಟಿ.ಖಾದರ್ ಆರೋಪಿಸಿದರು. ಈ ವೇಳೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ‘ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ನಾನು ಗಲ್ಲಿಗೇರಲು ಸಿದ್ಧನಿದ್ದೇನೆ’ ಎಂದರು.
ನಾನು ಯಾವುದೇ ಸವಲತ್ತು ಪಡೆದಿಲ್ಲ. ಈ ಹಿಂದೆ ಗುಲ್ಬರ್ಗಾದಲ್ಲಿ ಉಮೇಶ್ ಜಾಧವ್ ಸ್ಪರ್ಧಿಸಿದಾಗ ನನ್ನ ಸಹೋದರ ಸಹ ಕಂಟೆಸ್ಟ್ ಮಾಡಿದ್ರು. ನನ್ನ ಸಹೋದರ ಮನೆಯಿಂದ ಇಬ್ಭಾಗ ಆಗಿ 25 ವರ್ಷ ಆಯ್ತು. ನಾನು ಹೊನ್ನಾಳ್ಳಿ ಕ್ಷೇತ್ರದ ಜಾತ್ಯಾತೀತ ವ್ಯಕ್ತಿ. ಎರಡು ಸಾವಿರ ಜಾತಿ ಮತಗಳು ಇಲ್ಲ. ಎಲ್ಲಾ ಸಮುದಾಯದವರು ನನ್ನ ಗೌರವಿಸುತ್ತಾರೆ. ನನ್ನನ್ನ ಪ್ರೀತಿ ಮಾಡ್ತಾರೆ. ನನ್ನ ನಕಲಿ ಸರ್ಟಿಫಿಕೇಟ್ ಇದ್ದರೆ ಬಿಡುಗಡೆ ಮಾಡಬೇಕು ಎಂದು ತಿರುಗೇಟು ನೀಡಿದರು.
ಇದನ್ನು ಓದಿ: ಹಿಜಾಬ್ ವಿವಾದ: ಹೈಕೋರ್ಟ್ ತೀರ್ಪಿನಿಂದ ಕಾಂಗ್ರೆಸ್ ಮುಖಂಡರಿಗೆ ಕಪಾಳ ಮೋಕ್ಷ- ರೇಣುಕಾಚಾರ್ಯ
ಗುಲ್ಬರ್ಗಾದಲ್ಲಿ ಸಹೋದರ ಕಂಟೆಸ್ಟ್ ಮಾಡಿದಾಗ ನಾನೇ, ನಾಮಪತ್ರ ವಾಪಾಸ್ ಪಡೆಯಬೇಕು ನನ್ನ ಗೌರವ ಹೋಗುತ್ತೆ ಎಂದು ಹೇಳಿದ್ದೆ. ನಾನು ಜಾತ್ಯಾತೀತ ವ್ಯಕ್ತಿ, ಒಂದು ಜಾತಿಗೆ ಸೀಮಿತವಾಗಿಲ್ಲ. ಸರ್ಕಾರದ ಸವಲತ್ತು ಪಡೆದಿದ್ದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾದ ಪರಮೇಶ್ವರ್ ನಾಯ್ಕ್, ಭಿಮಾ ನಾಯ್ಕ್, ಸೇರಿದಂತೆ ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ಮಧ್ಯೆ ಸಚಿವ ಮಾಧುಸ್ವಾಮಿ ಈ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ಯಾರಾದರೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿದ್ದರೆ ಅವರ ವಿರದ್ಧ ದೂರು ದಾಖಲಿಸಲು ಅವಕಾಶ ಇದೆ. ಯಾರಾದರೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಳಿಕ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು, ಎಸ್ ಸಿ ಸರ್ಟಿಫಿಕೇಟ್ ವಿಚಾರದಲ್ಲಿ ಯಾವುದೆ ಕಾಗದ ಪತ್ರ ನನ್ನ ಬಳಿ ಇಲ್ಲ. ನಿನ್ನೆ ಚರ್ಚೆಯಾಗಿದೆ. ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಸುಳ್ಳು ಸರ್ಟಿಫಿಕೇಟ್ ಆಗಿರುವುದಕ್ಕೆ ಶಿಕ್ಷೆ ಏನು ಆಗ್ಬೇಕು ಅಂತ ಕಾನೂನು ಇದೆ. ಇದು ತನಿಖೆಯಾಗ್ಲಿ, ದಾಖಲೆಗಳ ಮೇಲೆ ಸತ್ಯಾಸತ್ಯತೆ ಹೊರ ಬರಲಿ. ಸಾರ್ವಜನಿಕ ಜೀವನದಲ್ಲಿ ಅವರು ಇದ್ದಾರೆ. ಕಾನೂನು ಪ್ರಕಾರ ಮಾಡಿದ್ದಾರೋ ಇಲ್ವೋ ಅನ್ನೋ ಬಗ್ಗೆ ತನಿಖೆಯಾಗ್ಲಿ. ಈ ಚರ್ಚೆ ಇಲ್ಲಿಗೆ ನಿಲ್ಲಿಸಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದರು.