
ಸಂಗ್ರಹ ಚಿತ್ರ
ಬೆಂಗಳೂರು: ಪದೇ ಪದೇ ತೈಲ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದೆ.
ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಏರಿದ ತೈಲೋತ್ಪನ್ನಗಳ ಬೆಲೆ: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಗೊತ್ತಾ?
ಐದು ರಾಜ್ಯಗಳಿಗೆ ಚುನಾವಣೆ ನಡೆಯುವ ಮೊದಲು ನವೆಂಬರ್ನಲ್ಲಿ ಕೊನೆಯ ಬಾರಿಗೆ ಬೆಲೆ ಪರಿಷ್ಕರಣೆ ಮಾಡಿ ಕಾರ್ಯಗತಗೊಳಿಸಲಾಯಿತ್ತು. ಚುನಾವಣೆ ಅಂತ್ಯಗೊಂಡ ಕೂಡಲೇ ಮತ್ತೆ ಬೆಲೆ ಏರಿಕೆಯಾಗುತ್ತಿದೆ ಎಂದು ಕಿಡಿಕಾರಿದರು.
ಜನರು ಈಗಾಗಲೇ ದುಬಾರಿ ವೆಚ್ಚದಲ್ಲಿ ತತ್ತರಿಸುತ್ತಿದ್ದು, ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸುಮಾರು 80 ಪೈಸೆ ಮತ್ತು ಎಲ್ಪಿಜಿ ಮೇಲೆ 50 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆ, ಕಬ್ಬಿಣ, ಸಿಮೆಂಟ್ ಬೆಲೆ ಈಗಾಗಲೇ ಗಗನಕ್ಕೇರಿದೆ. ಡೀಸೆಲ್ ಬೆಲೆ ಏರಿಕೆಯಾದರೆ, ರಸಗೊಬ್ಬರ, ಆಹಾರ ಪದಾರ್ಥಗಳ ಬೆಲೆಗಳು ಹೀಗೆ ಎಲ್ಲವೂ ಹೆಚ್ಚಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ-LPG ಬೆಲೆ ಹೆಚ್ಚಳ, ಇಂದಿನ ದರ ಹೀಗಿದೆ
ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಮೇಲಿನ ತೆರಿಗೆ ಕಡಿಮೆ ಮಾಡಿ, ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದೆ. ಬೆಲೆಯೇರಿಕೆಗೆ ನನ್ನ ವಿರೋಧವಿದೆ. ಕೇಂದ್ರ ಸರ್ಕಾರ ಈ ಕೂಡಲೆ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಬೆಲೆಯೇರಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.