ಸದನದಲ್ಲಿ ಕೈ-ಕೈ ಹಿಡಿದು ಒಟ್ಟಿಗೆ ಕುಳಿತು ಸಿದ್ದರಾಮಯ್ಯ-ಯಡಿಯೂರಪ್ಪ ಮಾತುಕತೆ
ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುಖಾಮುಖಿಯಾದರೆ ಅಲ್ಲಿ ದೀರ್ಘವಾದ ವಾಕ್ಸಮರವೇ ನಡೆಯುತ್ತದೆ. ಇಬ್ಬರು ರಾಜಕೀಯವಾಗಿ ಎಷ್ಟೇ ವಿರೋಧಿಗಳಾಗಿದ್ದರೂ, ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
Published: 24th March 2022 11:54 AM | Last Updated: 24th March 2022 12:24 PM | A+A A-

ಸದನದಲ್ಲಿ ಸಿದ್ದರಾಮಯ್ಯ ಅವರ ಹೆಡ್'ಫೋನ್ ತೆಗೆಯುತ್ತಿರುವ ಯಡಿಯೂರಪ್ಪ
ಬೆಂಗಳೂರು: ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುಖಾಮುಖಿಯಾದರೆ ಅಲ್ಲಿ ದೀರ್ಘವಾದ ವಾಕ್ಸಮರವೇ ನಡೆಯುತ್ತದೆ. ಇಬ್ಬರು ರಾಜಕೀಯವಾಗಿ ಎಷ್ಟೇ ವಿರೋಧಿಗಳಾಗಿದ್ದರೂ, ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಬುಧವಾರ ಸದನದಲ್ಲಿ ಇಬ್ಬರು ನಾಯಕರು ಜೊತೆಯಾಗಿ ಕುಳಿತು ಚರ್ಚೆ ನಡೆಸಿದ್ದು ಕಂಡು ಬಂದಿತು. ಉಭಯ ನಾಯಕರು ರಾಜಕೀಯದಾಚೆಗೂ ಉತ್ತಮ ಬಾಂಧವ್ಯ ಹೊಂದಿದ್ದು, ಇಂದು ಭೋಜನಕೂಟ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿ, ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಕೆಲ ಹೊತ್ತು ಕೈ-ಕೈ ಹಿಡಿದುಕೊಂಡೇ ಮಾತುಕತೆ ನಡೆಸಿದರು.
ಇದನ್ನೂ ಓದಿ: ನಮ್ ಮನೆ ದೇವ್ರು ಸಿದ್ದರಾಮೇಶ್ವರ, ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ!
ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ ಬಳಿಕ ಮಾಧ್ಯಮ ಗ್ಯಾಲರಿ ಬಳಿ ಹೋದ ಯಡಿಯೂರಪ್ಪ ಅವರು, ಸ್ಥಳದಲ್ಲಿದ್ದ ಕ್ಯಾಮೆರಾಮನ್ ಗಳಿಗೂ ಆಹ್ವಾನ ನೀಡಿದರು.
ಬಜೆಟ್ ಅಧಿವೇಶನದ ವೇಳೆ ಮುಖ್ಯಮಂತ್ರಿ, ಸಚಿವರು ಹಾಗೂ ಹಿರಿಯ ನಾಯಕರು ವಿಧಾನಸೌಧದಲ್ಲಿ ಉಪಾಹಾರ ಕೂಟ ಏರ್ಪಡಿಸುವ ಪದ್ಧತಿ ಜಾರಿಯಲ್ಲಿದೆ. ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಎರಡು ವರ್ಷ ಈ ಪದ್ಧತಿಯನ್ನು ಅನುಸರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭೋಜನ ಕೂಟವನ್ನು ಏರ್ಪಡಿಸಲಾಗಿದೆ.
ಕೆಲ ದಿನಗಳ ಹಿಂದೆ ಕಂದಾಯ ಸಚಿವ ಆರ್.ಅಶೋಕ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೋಜನ ಕೂಟ ಏರ್ಪಡಿಸಿದ್ದರು. ಬುಧವಾರ ಸಚಿವ ಸುಧಾಕರ್ ಅವರು ಏರ್ಪಡಿಸಿದ್ದರು. ಇಂದು ಯಡಿಯೂರಪ್ಪ ಅವರು ಆಯೋಜಿಸಿದ್ದಾರೆ.