ಈಶ್ವರಪ್ಪ, ಖೂಬಾ ಬಂಧನ ಏಕಿಲ್ಲ? ಯೋಧ ಅಲ್ತಾಫ್ ಗೆ ಏಕೆ ಪರಿಹಾರ ನೀಡಿಲ್ಲ?; ದುಪ್ಪಟ್ಟ ಧರಿಸಲು ಅವಕಾಶ ನೀಡಿ: ಸದನದಲ್ಲಿ ಸಿದ್ದರಾಮಯ್ಯ
ರಾಜ್ಯದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಹರ್ಷ ಕೊಲೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಶವ ಮೆರವಣಿಗೆ ನಡೆಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ಅವರನ್ನು ಮತ್ತು ಆಳಂದದಲ್ಲಿ ಮೆರವಣಿಗೆ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Published: 24th March 2022 06:52 PM | Last Updated: 24th March 2022 07:30 PM | A+A A-

ಸದನದಲ್ಲಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಹರ್ಷ ಕೊಲೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಶವ ಮೆರವಣಿಗೆ ನಡೆಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ಅವರನ್ನು ಮತ್ತು ಆಳಂದದಲ್ಲಿ ಮೆರವಣಿಗೆ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿದಾನಸಭೆಯಲ್ಲಿ ಇಂದು ರಾಜ್ಯದ ಕಾನೂನು – ಸುವ್ಯವಸ್ಥೆ ಕುರಿತು ಸದನದಲ್ಲಿ ಮಾತನಾಡಿದ ಅವರು, ”ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ” ಎಂದು ಮುಖ್ಯಮಂತ್ರಿ ಗಳೇ ಹೇಳಿಕೆ ನೀಡಿದರೆ ಪೊಲೀಸರ ನೈತಿಕ ಸ್ಥೈರ್ಯ ಏನಾಗಬೇಡ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ, ಸಹಾಯಾನುದಾನ ಕುಸಿತ
'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಹಿಂದೂ ಕಾರ್ಯಕರ್ತರ ಕೊಲೆಯಾದರೆ 25 ಲಕ್ಷ ಪರಿಹಾರ ನೀಡುತ್ತೀರಿ. ಆದರೆ ನರಗುಂದದ ಸಮೀರ್, ಬೆಳ್ತಂಗಡಿಯ ದಿನೇಶ್, ಹಿಮಪಾತದಲ್ಲಿ ಮೃತಪಟ್ಟ ಮಡಿಕೇರಿಯ ಯೋಧ ಅಲ್ತಾಫ್ ಅಹ್ಮದ್ ಅವರಿಗೆ ಸರ್ಕಾರ 25 ಲಕ್ಷ ಪರಿಹಾರ ನೀಡಿಲ್ಲ. ಸತ್ತವರು ಯಾರು ಎಂಬುದಕ್ಕಿಂತ ಕೊಂದವರು ಯಾರು? ಎಂಬುದರ ಮೇಲೆ ಸರ್ಕಾರದ ಪರಿಹಾರ ನೀತಿ ನಿರ್ಧಾರವಾಗುತ್ತದೆ. ಇದು ಎಷ್ಟು ಸರಿ..ಹರ್ಷ ಕೊಲೆಯಾದಾಗ ಈಶ್ವರಪ್ಪನವರೇ ಶಿವಮೊಗ್ಗದಲ್ಲಿ ಮೆರವಣಿಗೆ ನಡೆಸಿದರು. ಸಚಿವರಾಗಿ ಈ ರೀತಿ ಮಾಡುವುದು ಎಷ್ಟು ಸರಿ? ಈ ಬಗ್ಗೆ ನಾನೇ ಡಿಜಿಪಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಕಾನೂನು ಸುವ್ಯವಸ್ಥೆ ಕಾಪಾಡಲಾಗದ ನೀವು ಅಧಿಕಾರದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ: ವಿಧಾನಸಭೆಯಲ್ಲಿ ಕೈ-ಕಮಲ ವಾಗ್ವಾದ; ಸರ್ಕಾರದ ಉತ್ತರವೇನು?
ಹಿಜಾಬ್ ವಿವಾದ: ದುಪ್ಪಟ್ಟ ಧರಿಸಲು ಅವಕಾಶ ನೀಡಿ
ಇದೇ ವೇಳೆ ಹಿಜಾಬ್ ವಿವಾದದ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ದುಪ್ಪಟ್ಟ ಧರಿಸುವುದಕ್ಕೆ ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. 'ನಾನು ಹಿಜಾಬ್ ಬಗ್ಗೆ ಪ್ರಸ್ತಾಪಿಸುವುದಕ್ಕೆ ಹೋಗುವುದಿಲ್ಲ. ಏಕೆಂದರೆ ಅದೀಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ ನಿನ್ನೆ ಕೆಲ ಮುಸ್ಲಿಂ ಧರ್ಮ ಗುರುಗಳು ನಮ್ಮನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದ್ದಾರೆ. ಅವರು ಶಾಲೆ- ಕಾಲೇಜಿನಲ್ಲಿ ಸಮವಸ್ತ್ರವನ್ನೇ ಧರಿಸುತ್ತಾರೆ. ಆದರೆ ಅದೇ ಬಣ್ಣದ ದುಪ್ಪಟವನ್ನು ಬಳಸುವುದಕ್ಕೆ ಅವಕಾಶ ಕೋರಿದ್ದಾರೆ. ಅದು ಬುರ್ಖಾ ಅಥವಾ ಹಿಜಾಬ್ ಅಲ್ಲ. ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇದು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿನ ಪ್ರಶ್ನೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಿಜಾಬ್ ಹೊತ್ತಿಸಿದ ಕಿಡಿ: ಮಾತು ತಪ್ಪಿದ ಮಾತಿನ ಬ್ರಹ್ಮ ಹಿರೇಮಗಳೂರು ಕಣ್ಣನ್; ಹಲವರ ಆಕ್ರೋಶ
ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣದಿಂದ ವಂಚಿತರಾಗದಂತೆ ನಾವು ಸಾಕಷ್ಟು ಸಲಹೆ ನೀಡಿದರೂ ಆ ಆರು ಮಂದಿ ವಿದ್ಯಾರ್ಥಿನಿಯರು ನಮ್ಮಮಾತು ಕೇಳಿಲ್ಲ. ನೀವೇ ಸ್ವಲ್ಪ ಅವರ ಮನವೊಲಿಸಿ ಎಂದು ಹೇಳಿದರು.