ರಾಜಕೀಯ ಜುಗಲ್ಬಂದಿ: ಮೊದಲು ರಾಹುಲ್ ಗಾಂಧಿ, ನಂತರ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ
ತುಮಕೂರಿನ ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಅಂಗವಾಗಿ ಏಪ್ರಿಲ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಠಕ್ಕೆ ಆಗಮಿಸಲಿದ್ದಾರೆ. ಅದಕ್ಕೆ ಒಂದು ದಿನ ಮೊದಲು ಅಂದರೆ ನಾಡಿದ್ದು ಮಾರ್ಚ್ 31ರಂದು ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡಲಿದ್ದಾರೆ.
Published: 29th March 2022 02:30 PM | Last Updated: 29th March 2022 02:30 PM | A+A A-

ರಾಹುಲ್ ಗಾಂಧಿ-ಅಮಿತ್ ಶಾ
ತುಮಕೂರು: ತುಮಕೂರಿನ ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಅಂಗವಾಗಿ ಏಪ್ರಿಲ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಠಕ್ಕೆ ಆಗಮಿಸಲಿದ್ದಾರೆ. ಅದಕ್ಕೆ ಒಂದು ದಿನ ಮೊದಲು ಅಂದರೆ ನಾಡಿದ್ದು ಮಾರ್ಚ್ 31ರಂದು ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡಲಿದ್ದಾರೆ. 2018ರ ನಂತರ ರಾಹುಲ್ ಗಾಂಧಿಯವರ ಭೇಟಿ ಇದಾಗಿದ್ದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.
2023ಕ್ಕೆ ಅಂದರೆ ಮುಂದಿನ ವರ್ಷ ಈ ಸಮಯಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪರ್ವ. ಈ ಸಮಯದಲ್ಲಿ ರಾಜ್ಯದ ನಿರ್ಣಾಯಕ ಮತದಾರರಾಗಿರುವ ಲಿಂಗಾಯತ ಸಮುದಾಯವನ್ನು ಒಲಿಸಲು ಈ ನಾಯಕರು ಯಾವ ರೀತಿ ರಾಜಕೀಯ ತಂತ್ರಗಾರಿಕೆ ಹೆಣೆಯಲಿದ್ದಾರೆ ಎಂಬುದು ಕುತೂಹಲ.
ಕಾಂಗ್ರೆಸ್ ನಲ್ಲಿ ಇದು ಹಠಾತ್ ಬೆಳವಣಿಗೆ. ರಾಜ್ಯ ನಾಯಕರ ಸಲಹೆ ಮೇರೆಗೆ ರಾಹುಲ್ ಗಾಂಧಿಯವರು ಮಾರ್ಚ್ 31ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಬೆಂಗಳೂರಿಗೆ ಬಂದಿಳಿಯಲಿರುವ ರಾಹುಲ್ ಗಾಂಧಿ ನಂತರ ತುಮಕೂರಿಗೆ ತೆರಳಿ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಲಿದ್ದಾರೆ. ಅಲ್ಲಿಯೇ ಮಧ್ಯಾಹ್ನದ ಭೋಜನ ಸವಿಯಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಗಾಂಧಿ ಕುಟುಂಬಕ್ಕೂ ಮಠಗಳಿಗೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಇಂದಿರಾ ಗಾಂಧಿಯವರು ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ, ಸಲಹೆ ಪಡೆಯುತ್ತಿದ್ದರು. ರಾಜೀವ್ ಗಾಂಧಿಯವರು ವಾರದವರೆಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು ಎನ್ನುತ್ತಾರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.
2012ರ ಏಪ್ರಿಲ್ 28ರಂದು ನಡೆದಿದ್ದ ಸಿದ್ದಗಂಗಾ ಶ್ರೀಗಳ 105ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಆ ಸಮಯದಲ್ಲಿ ಬಿ ಎಸ್ ಯಡಿಯೂರಪ್ಪನವರು ಬಿಜೆಪಿಯಿಂದ ಹೊರಬಂದು ಕೆಜೆಪಿ ಪಕ್ಷ ಕಟ್ಟಿದ್ದರು.
ಈ ಬಾರಿ ಬಿಜೆಪಿ ನಾಯಕ ಅಮಿತ್ ಶಾ 115ನೇ ಜಯಂತಿ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಮಠದ ಮೇಲೆ ಅಭಿಮಾನವನ್ನು ತೋರಿಸಲು ಸಜ್ಜಾಗಿವೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯನವರು ಹಿಜಾಬ್ ಧರಿಸುವ ವಿಚಾರ ಮಾತನಾಡುತ್ತಾ ಸ್ವಾಮೀಜಿಗಳು ತಲೆಗೆ ಶಾಲು ಹಾಕಿಕೊಳ್ಳುವುದಿಲ್ಲವೇ ಎಂದು ಹೇಳಿದ್ದು ವಿವಾದವನ್ನುಂಟುಮಾಡಿತ್ತು.
ಭಾರತ ರತ್ನ ವಿವಾದ: ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂಬ ವಿಚಾರ ಅಮಿತ್ ಶಾ ಭೇಟಿಗೆ ಮುನ್ನ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಭಕ್ತರ ಆಶೋತ್ತರಗಳಿಗೆ ಸ್ಪಂದಿಸಿ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಆದರೆ ಈಗಿನ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ತಕರಾರು ತೆಗೆದಿದ್ದು, ಮಠವು ಅದನ್ನು ಎಂದಿಗೂ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಶಸ್ತಿಯು ಸ್ವಾಭಾವಿಕವಾಗಿ ಬಂದರೆ ಅದು ಅಮೃತದಂತೆ (ಅಮರ) ಮತ್ತು ಒತ್ತಡದಿಂದ ಬಂದರೆ ಅದು ವಿಷ, ಯಾರೂ ಈ ವಿಷಯವನ್ನು ಒತ್ತಾಯಪೂರ್ವಕವಾಗಿ ಹೇರಬಾರದು ಎಂದು ಹೇಳಿದ್ದಾರೆ.