ಕೃಷಿ ಹೊಂಡ ಯೋಜನೆ ಯಾಕೆ ನಿಲ್ಲಿಸಿದ್ದಿರಾ? ‘ಹಿಂಗಾರಿಗೆ ಗೊಬ್ಬರ ಬೇಕೇಬೇಕು’: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಿದ್ದರಾಮಯ್ಯ
ಕೃಷಿ ಹೊಂಡ ಯೋಜನೆ ಯಾಕೆ ನಿಲ್ಲಿಸಿದ್ದಿರಾ? ಹಿಂಗಾರು ಬೆಳೆಗಳಿಗೆ ಯೂರಿಯಾ ಗೊಬ್ಬರ ಬೇಕೆ ಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದರು.
Published: 29th March 2022 04:15 PM | Last Updated: 29th March 2022 05:07 PM | A+A A-

ವಿಧಾನಸಭೆ
ಬೆಂಗಳೂರು: ಕೃಷಿ ಹೊಂಡ ಯೋಜನೆ ಯಾಕೆ ನಿಲ್ಲಿಸಿದ್ದಿರಾ? ಹಿಂಗಾರು ಬೆಳೆಗಳಿಗೆ ಯೂರಿಯಾ ಗೊಬ್ಬರ ಬೇಕೆ ಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದರು.
ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಮ್ಮಿ ಆಗಿವೆ. ಕೃಷಿಕನನ್ನು ಶಕ್ತಿವಂತನಾಗಿ ಮಾಡುವ ಹಲವು ಕ್ರಮಗಳನ್ನ ಕೈಗೊಂಡಿದ್ದೇವೆ. ಸೂಟು ಬೂಟು ಹಾಕಿರೋರೂ ಕೃಷಿ ಕಡೆ ಸೆಳೆಯಲ್ಪಡುತ್ತಿದ್ದಾರೆ. ಕೃಷಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನಮ್ಮ ಸರ್ಕಾರ ಸ್ಕಾಲರ್ಶಿಪ್ ಕೊಡ್ತಿದೆ. 2020-21 ರ ಬಜೆಟ್ ನಲ್ಲಿ ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ 50% ಮೀಸಲಾತಿ ನೀಡಿದ್ದರ ಪರಿಣಾಮ ಈ ಸಲ 1083 ಸೀಟುಗಳು ಹೆಚ್ಚಾಗಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರಿಸಿದರು.
ಆದರೆ, ಕೃಷಿ ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಬಿ.ಸಿ.ಪಾಟೀಲರು ಬಹಳ ಚೆಂದಲವಾಗಿ ಉತ್ತರ ನೀಡುತ್ತಿದ್ದಾರೆ. ಜಾಹೀರಾತು ಕೂಡ ನೀಡುತ್ತಿದ್ದಾರೆ. ಆದ್ರೆ ಯಾವುದೇ ಕೆಲಸ ರೈತರಿಗೆ ಆಗುತ್ತಿಲ್ಲ. ಇದರಿಂದ ರೈತರಿಗೆ ಪ್ರಯೋಜನವಿಲ್ಲ ಅಂತಾ ಆಕ್ಷೇಪ ವ್ಯಕ್ತಪಡಿಸಿದರು. ಮೊದಲು ಸಚಿವರು ಉತ್ತರ ನೀಡಲಿ. ಆ ಬಳಿಕ ಪ್ರಶ್ನೆ ಮಾಡುವಂತೆ ಸ್ಪೀಕರ್ ಸೂಚನೆ ನೀಡಿದರು. ಸ್ಪೀಕರ್ ಸೂಚನೆಗೆ ಜೆಡಿಎಸ್, ಕಾಂಗ್ರೆಸ್ ಸದಸ್ಯರು ಸುಮ್ಮನಾದರು.
ಇದನ್ನು ಓದಿ: ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ ಕಾಂಗ್ರೆಸ್ ಪಕ್ಷದ ಪ್ರಮುಖ ಜವಾಬ್ದಾರಿಗಳು! ಈ ಬಾರಿ ನಿಮ್ಮ ಪ್ರಚಾರದ ಸರಕೇನು?
ಬಳಿಕ ಪತ್ರಿಕೆಯಲ್ಲಿ ವರದಿಯಾದ ಬಗ್ಗೆ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ, ಗೊಬ್ಬರ ಕಳುಹಿಸುತ್ತಿವಿ ಅನ್ನೋದು ಒಂದು ಭಾಗ. ಕ್ಯೂ ನಲ್ಲಿ ನಿಂತ ಹೆಣ್ಣು ಮಕ್ಕಳಿಗೆ ಗೊಬ್ಬರ ಕೊಟ್ಟಿಲ್ಲ.. ಯಾರೋ ಫೋನ್ ಮಾಡಿದ್ರೋ ಅಂಥವರಿಗೆ ಗೊಬ್ಬರ ಕೊಟ್ಟಿದ್ದಾರೆ ಅಂತ ಹೇಳಿ ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ. ಇವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಾ? ಹಿಂಗಾರು ಬೆಳೆಗೆ ಯೂರಿಯಾ ಗೊಬ್ಬರ ಬೇಕೆ ಬೇಕು. ಅದನ್ನ ಕೂಡಲೇ ಸಪ್ಲೆ ಮಾಡ್ಬೇಕು. ಕೃಷಿ ಮಾಡುವ ಹೆಣ್ಣು ಮಕ್ಕಳು ಕ್ಯೂ ನಲ್ಲಿ ನಿಂತ್ರೂ ಅವರಿಗೆ ಕೊಡ್ದೆ, ಪೋನ್ ಮಾಡಿದವರಿಗೆ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಸಿದ್ದರಾಮಯ್ಯ, ಕೃಷಿ ಭಾಗ್ಯ ಕಾರ್ಯಕ್ರಮ 2014-15 ರಲ್ಲಿ ಪ್ರಾರಂಭವಾಯ್ತು. 1 ಲಕ್ಷದ 90 ಸಾವಿರ ಕೃಷಿ ಹೊಂಡಗಳಾಗಿವೆ. ಏಪ್ರಿಲ್ ನಿಂದ ಮೇ ವರೆಗೆ 30 ಸಾವಿರ ಕೃಷಿ ಹೊಂಡಗಳಾದ್ವು. ಒಟ್ಟು 2,20,000 ಕೃಷಿ ಹೊಂಡಗಳು ಇದ್ವು. ಸಮಿಶ್ರ ಸರ್ಕಾರದಲ್ಲಿ 40 ಸಾವಿರ ಕೃಷಿ ಹೊಂಡ ಮಾಡಿದ್ರು. ಒಟ್ಟು 2,60,000 ಕೃಷಿ ಹೊಂಡ ಆದವು.
2019-20 ರಲ್ಲಿ 2,900 ಕೃಷಿ ಹೊಂಡ ಮಾಡಿದ್ರಿ. 2021-22 ರಲ್ಲಿ ಒಂದು ಮಾಡಿಲ್ಲ, 22-23 ಕ್ಕೆ ಒಂದು ರೂಪಾಯಿ ಇಟ್ಟಿಲ್ಲ. ಇದು ಒಳ್ಳೆಯ ಕಾರ್ಯಕ್ರಮ ಯಾಕೆ ನಿಲ್ಸಿದ್ರಿ ಅಂತ ಕೇಳಿದರೆ ನಿಮ್ಮಲ್ಲಿ ಸ್ಪಷ್ಟನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ವಾರ್ಷಿಕ ವರದಿಯನ್ನ ಓದಿದಿರಾ..? ಕೃಷಿ ವಿಜ್ಞಾನಿಗಳು ಏನ್ ಹೇಳಿದಾರೆ ಗೊತ್ತಾ ಎಂದು ಬಿ ಸಿ ಪಾಟೀಲ್ ಗೆ ಪ್ರಶ್ನಿಸಿದ ಸಿದ್ದರಾಮಯ್ಯ, ಕೃಷಿ ಹೊಂಡಗಳನ್ನು ಯಾಕೆ ನಿಲ್ಲಿಸಿದ್ದೀರಿ? ಸದ್ಯಕ್ಕೆ 2 ಲಕ್ಷದ 60 ಸಾವಿರ ಕೃಷಿ ಹೊಂಡಗಳು ಇವೆ. ಯಾಕೇ ಏನಾದರೂ ತನಿಖೆ ಆಗ್ತಿದೆಯಾ ಹೇಳಿ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಅವರ ಈ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಬಿಸಿ ಪಾಟೀಲ್, ಕೃಷಿ ಹೊಂಡಗಳನ್ನು ನಾವು ನಿಲ್ಲಿಸಿಲ್ಲ. ಆದರೆ NREGSನಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಪಾಟೀಲ್ ಹೇಳಿದರು. ಸಚಿವರ ಈ ಉತ್ತರಕ್ಕೆ ಮತ್ತೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಸರ್ಕಾರಕ್ಕೆ ಕೃಷಿ ಹೊಂಡಗಳನ್ನು ಮಾಡಬಾರದು ಅನ್ನೋ ಉದ್ದೇಶ ಅಲ್ಲ. ಕೆಲ ಜಿಲ್ಲೆಗಳಲ್ಲಿ ಜಾಸ್ತಿಯಾಗಿವೆ. ಇನ್ನೂ ಕೆಲವು ಕಡೆ ಕಡಿಮೆಯಾಗಿವೆ. ಮಳೆ ಕಡಿಮೆ ಇರುವ ಕಡೆ ಇದು ಉಪಯುಕ್ತವಾಗಿದೆ. ಹೀಗಾಗಿ ಎಲ್ಲಿಲ್ಲೆ ಅವಶ್ಯಕತೆ ಇದೆಯೋ ಅಲ್ಲಿ ಕೃಷಿ ಹೊಂಡಾ ನಿರ್ಮಿಸಲು ಪುನರ್ ಪರಿಶೀಲನೆ ಮಾಡ್ತೀವಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.