ಮೀಸಲಾತಿ ಹೆಚ್ಚಳ: ಶೀಘ್ರದಲ್ಲೇ ಸರ್ವಪಕ್ಷ ಸಭೆ ನಡೆಸಿ ಅಂತಿಮ ನಿರ್ಧಾರ – ಸಿಎಂ ಬೊಮ್ಮಾಯಿ
ಮೀಸಲಾತಿ ಹೆಚ್ಚಳ ಕುರಿತಂತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.
Published: 30th March 2022 06:36 PM | Last Updated: 30th March 2022 06:36 PM | A+A A-

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಮೀಸಲಾತಿ ಹೆಚ್ಚಳ ಕುರಿತಂತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಎಸ್ ಟಿ ಸಮುದಾಯದ ಮೀಸಲಾತಿಯನ್ನು ಶೇ. 7.5ಕ್ಕೆ ಏರಿಸಬೇಕೆಂದು ಅವರ ಒತ್ತಾಯ ಇದೆ. ಈ ಹಿಂದೆ ಮೀಸಲಾತಿ ಶೇ.50 ದಾಟಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅದನ್ನ ತಳ್ಳಿ ಹಾಕಿತು. ಈ ವೇಳೆ ಸಮ್ಮಿಶ್ರ ಸರ್ಕಾರ ಇದ್ದಾಗ ಸಮಿತಿಯೊಂದನ್ನು ರಚನೆ ಮಾಡಿತ್ತು. ಜಸ್ಟೀಸ್ ನಾಗಮೋಹನ್ ದಾಸ್ ಈಗಾಗ್ಲೇ ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಏಪ್ರಿಲ್ 14 ರ ಒಳಗಾಗಿ ಮೀಸಲಾತಿ ಘೋಷಿಸಬೇಕು: ಪಂಚಮಸಾಲಿ ಸ್ವಾಮೀಜಿ ಅಂತಿಮ ಗಡುವು
ಇದಾದ ಬಳಿಕ ಬೇರೆ ಬೇರೆ ಸಮುದಾಯಗಳು ಹಲವು ಬೇಡಿಕೆಗಳನ್ನ ಇಟ್ಟರು. ಜನಸಂಖ್ಯೆ ಆಧಾರದ ಮೇಲೆ ಎಸ್ ಸಿ/ಎಸ್ ಟಿ ಸಮುದಾಯದವರು ಒತ್ತಾಯ ಮಾಡ್ತಾರೆ. ಒಬಿಸಿಯಲ್ಲಿರುವವರು ಎಸ್ ಟಿ ಮೀಸಲಾತಿ ಕೊಡಿ ಅಂತಾರೆ. 3ಎ ನಲ್ಲಿರುವವರು 2ಎ ಗೆ ಬರಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿದ್ದು, ಎಲ್ಲಾ ರಾಜ್ಯಗಳಿಗೆ ತಮ್ಮ ಅಭಿಪ್ರಾಯ ಕೇಳಿದೆ ಎಂದರು.
ಜನಸಂಖ್ಯೆ ಹೆಚ್ಚಾಗಿದೆ ಮೀಸಲಾತಿ ಮಾರ್ಪಾಡುಬೇಕೆಂದು ನಾವು ಕೂಡ ಕೊಟ್ಟಿದ್ದೆವು. ಎಲ್ಲವನ್ನೂ ಪರಿಶೀಲನೆ ಮಾಡಿ ಎಂದು ನಾವು ಜಸ್ಟೀಸ್ ಸುಭಾಶ್ ಅಡಿ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ವಿ. ಇಂದಿರಾ ಸಹಾನಿ ಕೇಸ್ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಮೀಸಲಾತಿ ಶೇ. 50 ರೊಳಗೆ ಇರಬೇಕು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಮಾಡಿ ಅಂತಿಮ ತೀರ್ಮಾನ ಶೀಘ್ರದಲ್ಲೇ ಕೊಡುತ್ತೇವೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.