ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಗಂಡಸ್ತನ ಇದ್ದರೆ ಹಲಾಲ್ ವಿವಾದ ತಡೆಯಲಿ: ಹೆಚ್ ಡಿ ಕುಮಾರಸ್ವಾಮಿ
ಹಲಾಲ್ ಕಟ್ ಮಾಂಸ ಖರೀದಿಸುವ ವಿಚಾರ ರಾಯಕೀಯ ನಾಯಕರಿಗೆ ಈಗ ಚರ್ಚೆ, ಸವಾಲಿನ ವಿಷಯವಾಗಿದೆ. ಹಲಾಲ್ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗಂಡಸ್ತನದ ಸವಾಲು ಹಾಕಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ.
Published: 31st March 2022 01:54 PM | Last Updated: 31st March 2022 02:11 PM | A+A A-

ಸಿಎಂ ಬಸವರಾಜ ಬೊಮ್ಮಾಯಿ-ಹೆಚ್ ಡಿ ಕುಮಾರಸ್ವಾಮಿ
ರಾಮನಗರ: ಹಲಾಲ್ ಕಟ್ ಮಾಂಸ ಖರೀದಿಸುವ ವಿಚಾರ ರಾಯಕೀಯ ನಾಯಕರಿಗೆ ಈಗ ಚರ್ಚೆ, ಸವಾಲಿನ ವಿಷಯವಾಗಿದೆ. ಹಲಾಲ್ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗಂಡಸ್ತನದ ಸವಾಲು ಹಾಕಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ.
ರಾಜ್ಯದಲ್ಲಿ ಹಲಾಲ್ ಮಾಂಸ ವಿಚಾರದಲ್ಲಿ ಇಷ್ಟೊಂದು ಗದ್ದಲ, ಗಲಾಟೆ ನಡೆಯುತ್ತಿದ್ದರೂ ಏನು ಗೊತ್ತಿಲ್ಲದಂತೆ ಮೌನವಾಗಿದ್ದಾರೇಕೆ, ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿವರಿಗೆ ಗಂಡಸ್ತನ ಇದ್ದರೆ ಮಧ್ಯೆ ಪ್ರವೇಶಿಸಿ ಇದಕ್ಕೆ ತಡೆಯೊಡ್ಡಲಿ ಎಂದು ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ ಪರಿಷತ್, ಬಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರು. ಅವರಿಗೆ ರೈತರ ಬದುಕು ಗೊತ್ತಿದೆಯಾ? ನಮ್ಮ ರೈತರು ಕಟ್ ಮಾಡುವ ಮಾಂಸ ಕ್ಲೀನ್ ಮಾಡಲು ಅದೇ ಸಮಾಜದವರೇ ಬರಬೇಕು. ಈಗ ಹಲಾಲ್ – ಜಟ್ಕಾ ಕಟ್ ಅಂತಿದ್ದಾರೆ. ನಿಮ್ಮ ಜಟ್ಕಾ ಮಾಡುವುದಕ್ಕೆ, ಇನ್ನೊಂದು ಮಾಡುವುದಕ್ಕೂ ಅವರೇ ಬರಬೇಕು. ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಸರು ಬರ್ತಾರಾ? ಅಕಾಲಿಕ ಮಳೆಯಿಂದಾಗಿ ಮಾವು ನಷ್ಟವಾಗಿದೆ. ಅದನ್ನು ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ವಿಶ್ವ ಹಿಂದೂ ಪರಿಷತ್ನವರು ಬಜರಂಗದಳದವರು ಇವರ ಹೊಟ್ಟೆ ಮೇಲೆ ಹೊಡೆಯಲು, ದೇಶ ಹಾಳು ಮಾಡುವುದಕ್ಕೆ ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಹಲಾಲ್ ವಿರೋಧಿಸಿ.. ಜಟ್ಕಾ ಜಮಾಯಿಸಿ.: ರಾಜ್ಯಾದ್ಯಂತ ಹಲಾಲ್ ಬಾಯ್ಕಟ್ ಅಭಿಯಾನ ತೀವ್ರ
ಕೊರೋನಾ ಸಂದರ್ಭದಲ್ಲಿ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಸಾವು-ನೋವು ಕಷ್ಟ ನೋಡಿದ್ದೇವೆ, ಜನರು ಆಕ್ಸಿಜನ್ ಇಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಸತ್ತವರು ಕೂಡ ಇದ್ದಾರೆ. ಆಗ ವಿಶ್ವ ಹಿಂದೂ ಪರಿಷತ್ – ಭಜರಂಗದಳದವರು ಎಲ್ಲಿ ಹೋಗಿದ್ದರು, ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಆಗಲಿಲ್ಲ, ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇ, ನನಗೆ ಓಟ್ ಮುಖ್ಯವಲ್ಲ, ಈ ನಾಡಿನ ಜನರ ಶಾಂತಿ ಮುಖ್ಯವಾಗಿದೆ, ಈ ವಿಷಯದಲ್ಲಿ ಮೌನವಾಗಿರಲು ಸಾಧ್ಯವಿಲ್ಲ ಕಾಂಗ್ರೆಸ್ ನವರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಹಲಾಲ್ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ, ಅದು ಮುಸ್ಲಿಮರ ಧಾರ್ಮಿಕ ಪದ್ಧತಿ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ನಮಗೆ ಏನಾಗಿದೆ ಚೆನ್ನಾಗಿದ್ದಿವಲ್ಲ. ಈಗ ಹಲಾಲ್ ತಿಂದರೆ ತೊಂದರೆ ಆಗುತ್ತಾ, ನಮ್ಮ ದೇವರು ಮೆಚ್ಚಲ್ವಾ, ಹೀಗಂತ ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಹೇಳಿಲ್ಲವಲ್ಲ. ಹಲಾಲ್ ಈಗಿನಿಂದಲ್ಲ, ಹಲವಾರು ವರ್ಷಗಳಿಂದಲೂ ನಡೆಯುತ್ತಿದೆ. ಎಂದರು.
ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ, ಸಿಎಂ ಬಸವರಾಜ ಬೊಮ್ಮಾಯಿಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು. ಹಳ್ಳಿಹಳ್ಳಿಗಳಲ್ಲಿ ಕೇಸರಿ ಬಟ್ಟೆ ತೊಟ್ಟು ವಿಷಬೀಜ ಬಿತ್ತುವುದಲ್ಲ. ಸಮಾಜ ಒಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ನೀವು ಯಾವ ಸಂವಿಧಾನವನ್ನು ಗೌರವಿಸುತ್ತಿದ್ದೀರಾ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ ಎಂದು ಪ್ರಶ್ನಿಸಿದರು.