ಸ್ವಾಮೀಜಿ ನಿಧನರಾದಾಗ ಬಾರದ ಕೇಂದ್ರ ನಾಯಕರು ಈಗ ಶ್ರದ್ಧಾಂಜಲಿ ಸಲ್ಲಿಸಲು ಬರುತ್ತಿರುವುದೇಕೆ?: ಚುನಾವಣಾ ಪ್ರಚಾರದ ಗಿಮಿಕ್ ಅಲ್ಲವೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಮತ್ತು ಶುಕ್ರವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
Published: 31st March 2022 01:24 PM | Last Updated: 31st March 2022 01:40 PM | A+A A-

ರಾಹುಲ್ ಗಾಂಧಿ ಮತ್ತು ಅಮಿತ್ ಶಾ
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಮತ್ತು ಶುಕ್ರವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇದು ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಸಂಕೇತವಾಗಿದೆ ಎಂದು ಹೇಳಲಾಗುತ್ತಿದೆ.
2023ರ ವಿಧಾನಸಭೆ ಚುನಾವಣೆಗಾಗಿ ಔಪಚಾರಿಕ ಪ್ರಚಾರ ಆರಂಭಿಸಲಾಗುತ್ತಿದೆ ಎನ್ನಲಾಗಿದೆ, ಏಕೆಂದರೇ 2019 ಜನವರಿ 21 ರಂದು ಶಿವಕುಮಾರ ಸ್ವಾಮೀಜಿ ನಿಧನರಾದಾಗ ಕೇಂದ್ರದ ಯಾವುದೇ ನಾಯಕರು ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿರಲಿಲ್ಲ. ಆದರೆ ಈಗ ಕೇಂದ್ರದ ಪ್ರಮುಖ ನಾಯಕರು ಬರುತ್ತಿದ್ದಾರೆ ಎಂದರೇ ಪ್ರಮುಖ ಸಮುದಾಯದ ಮತದಾರರನ್ನು ಓಲೈಸುವ ಗಿಮಿಕ್ ಎಂದು ಹೇಳಲಾಗುತ್ತಿದೆ.
ಗುರುವಾರ ಸಂಜೆ 4 ಗಂಟೆಗೆ ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ, ಇನ್ನೂ ಶುಕ್ರವಾರ ಬೆಳಗ್ಗೆ 10.55 ಕ್ಕೆ ಅಮಿತ್ ಶಾ ಆಗಮಿಸಲಿದ್ದು, ಸುಮಾರು 2 ಲಕ್ಷ ಜನ ಸೇರುವ ಸಾಧ್ಯತೆಯಿದೆ.
ಅಮಿತ್ ಶಾ ಅವರ ಭೇಟಿ ಮೊದಲೇ ನಿಗದಿಯಾಗಿತ್ತು, ಹೀಗಾಗಿ ತುಮಕೂರಿಗೆ ಅವರು ವಿಮಾನದಲ್ಲೇ ತೆರಳಲಿದ್ದಾರೆ, ಆದರೆ ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ತರಾತುರಿಯಲ್ಲಿ ಫಿಕ್ಸ್ ಆದ ಕಾರಣ ರಸ್ತೆ ಮೂಲಕವೇ ತುಮಕೂರಿಗೆ ಸಂಚರಿಸಲಿದ್ದಾರೆ. ಮಠಕ್ಕೆ ಹೋಗುವ ರಸ್ತೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಇದನ್ನೂ ಓದಿ: ರಾಜಕೀಯ ಜುಗಲ್ಬಂದಿ: ಮೊದಲು ರಾಹುಲ್ ಗಾಂಧಿ, ನಂತರ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ
ಅಮಿತ್ ಶಾ ಕಾರ್ಯಕ್ರಮದ ಸ್ವಾಗತ ಸಮಿತಿ ಮುಖ್ಯಸ್ಥರಾಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ವಿಜಯೇಂದ್ರ ಅವರನ್ನು ಲಿಂಗಾಯತ ಸಮುದಾಯದ ಉತ್ತರಾಧಿಕಾರಿಯನ್ನಾಗಿಸುವ ಪ್ರಬಲ ಸಂದೇಶ ರವಾನಿಸಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಲಿಂಗಾಯತ ಸಮುದಾಯದ ಮುಖಂಡರು- ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಬುಧವಾರ ಮಠಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಇಬ್ಬರು ವಿವಿಐಪಿಗಳ ಭೇಟಿಯಿಂದಾಗಿ ಬಂದೊಬಸ್ತ್ ನಲ್ಲಿ ಪೊಲೀಸರನ್ನೂ ಬ್ಯುಸಿಯಾಗಿಸಿದೆ. ಕೇಂದ್ರ ರೇಂಜ್ ಐಜಿಪಿ ಚಂದ್ರಶೇಖರ್ ಈಗಾಗಲೇ ತುಮಕೂರಿನಲ್ಲಿ ಬೀಡು ಬಿಟ್ಟಿದ್ದಾರೆ.
ರಾಹುಲ್ ಗಾಂಧಿ ಗುರುವಾರ ಬೆಂಗಳೂರಿಗೆ ಆಗಮಿಸಿ, ಸಂಜೆ 4 ಗಂಟೆಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ನಮನ ಸಲ್ಲಿಸಲಿದ್ದಾರೆ. ರಾತ್ರಿ ಬೆಂಗಳೂರಿಗೆ ವಾಪಸಾಗಿ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ತೊಡಗಿರುವ ಪಕ್ಷದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವ ಸಾಧ್ಯತೆಯಿದೆ.