ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಹಲವು ಮಹತ್ತರ ಬದಲಾವಣೆಗಳು?
ಇಂದು ಮೇ 2 ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್-ಮೇಯಲ್ಲಿ ವಿಧಾನಸಭೆ ಚುನಾವಣೆಯಿದ್ದು ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ, ಬಿಜೆಪಿಯಲ್ಲಿ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಯಿದೆ. ಈ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಸ್ ಸಂತೋಷ್ ನೀಡಿದ್ದಾರೆ.
Published: 02nd May 2022 08:37 AM | Last Updated: 02nd May 2022 02:11 PM | A+A A-

ಅಮಿತ್ ಶಾ
ಬೆಂಗಳೂರು: ಇಂದು ಮೇ 2 ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್-ಮೇಯಲ್ಲಿ ವಿಧಾನಸಭೆ ಚುನಾವಣೆಯಿದ್ದು ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ, ಬಿಜೆಪಿಯಲ್ಲಿ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಯಿದೆ. ಈ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಸ್ ಸಂತೋಷ್ ನೀಡಿದ್ದಾರೆ.
ಅಮಿತ್ ಶಾ ಭೇಟಿ ಸಹಜ ಎಂದು ಹೇಳಲಾಗುತ್ತಿದೆ. ಖೇಲೋ ಇಂಡಿಯಾದ ಸಮಾರೋಪ ಸಮಾರಂಭದಲ್ಲಿ ನಾಳೆ ಭಾಗವಹಿಸಲಿದ್ದು, ಬಸವ ಜಯಂತಿ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಲಿದ್ದಾರೆ. ಆದರೆ ಅವರು ಬರುವುದು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖ ಬದಲಾವಣೆ ಮಾಡಲು ಎಂಬುದು ಇಲ್ಲಿ ವಿಶೇಷ.
ದೀರ್ಘ ಸಮಯದಿಂದ ವಿಳಂಬವಾಗಿಕೊಂಡು ಬಂದಿರುವ ಸಚಿವ ಸಂಪುಟ ಪುನಾರಚನೆ ಮತ್ತು ಪಕ್ಷದ ಸ್ಥಿತಿಗತಿ ಇಲ್ಲಿ ಮುಖ್ಯವಾಗಿದೆ. ಬೊಮ್ಮಾಯಿಯವರು ತಮ್ಮ ಅಧಿಕೃತ ನಿವಾಸದಲ್ಲಿ ಅಮಿತ್ ಶಾ ಅವರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಿದ್ದಾರೆ.
ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲದಿರುವುದರಿಂದ ಈ ಬಾರಿ ಶಾ ಅವರ ಭೇಟಿ ನಿರ್ಣಾಯಕವಾಗಲಿದೆ. ಅನೇಕ ಹೊಸ ಮುಖಗಳಿಗೆ ನಾಯಕತ್ವ ನೀಡಬಹುದು, ಸರ್ಕಾರವು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ನಾಯಕರೊಬ್ಬರು ಹೇಳುತ್ತಾರೆ. ಎಂಟರಿಂದ ಹತ್ತು ಮಂದಿ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ, ಹೊಸ ಮುಖಗಳಿಗೆ ಮನ್ನಣೆ ಬಿಜೆಪಿಯ ಶಕ್ತಿ: ಬಿ ಎಲ್ ಸಂತೋಷ್; ಮಹತ್ವದ ಬದಲಾವಣೆಗೆ ಮುನ್ಸೂಚನೆಯೇ?
ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ, ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ದೆಹಲಿ ಮತ್ತು ಗುಜರಾತ್‌ನಲ್ಲಿ ಕಾರ್ಪೊರೇಷನ್ ಚುನಾವಣೆಗಳನ್ನು ಗೆಲ್ಲುವ ಮೂಲಕ ನಾವು ಆ ಪ್ರಯೋಗದಲ್ಲಿ ಯಶಸ್ವಿಯಾಗಿದ್ದೇವೆ. ಹಾಲಿ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರನ್ನು ದೂರವಿಟ್ಟು ಹೊಸ ಮುಖಗಳನ್ನು ಪರಿಚಯಿಸಿದ್ದೇವೆ ಎಂದು ಸಂತೋಷ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದು, ಬಿಜೆಪಿ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಇದೇ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಮಾತನಾಡಿದ್ದಾರೆ. “ನಾವು ಎಲ್ಲಿ ದುರ್ಬಲರಾಗಿದ್ದೇವೋ ಅಲ್ಲಿ ಬದಲಾವಣೆ ಅನಿವಾರ್ಯ, ಪಕ್ಷವು ದುರ್ಬಲ ನಾಯಕರನ್ನು ಉತ್ತೇಜಿಸುವುದಿಲ್ಲ. ನಮ್ಮದೇ ಆದ ಕರ್ನಾಟಕ ಮಾದರಿ ಇದೆ. ಗುಜರಾತ್ ಅಥವಾ ಪಂಜಾಬ್ ಮಾದರಿ ಇರುವುದಿಲ್ಲ ಎಂದು ಅವರು ಹೇಳಿದರು.
ಸಂತೋಷ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರು ಹೇಳಿದ್ದು ಸರಿ ಮತ್ತು ಸತ್ಯ ಎಂದಿದ್ದಾರೆ. ಸಂಜೆ ನಂತರ ಬೊಮ್ಮಾಯಿ ಅವರು ಸಂಪುಟ ಸಹೋದ್ಯೋಗಿಗಳಾದ ಗೋವಿಂದ ಕಾರಜೋಳ, ಬಿ ಶ್ರೀರಾಮುಲು, ಬಿ ಸಿ ನಾಗೇಶ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಸಂತೋಷ್ ಅವರನ್ನು ಭೇಟಿ ಮಾಡಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮೂಲಗಳ ಪ್ರಕಾರ, ಬಿಜೆಪಿಯ ಆಂತರಿಕ ಸಮೀಕ್ಷೆಯು ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷ ಎರಡರಲ್ಲೂ ಬದಲಾವಣೆಯಾಗದ ಹೊರತು ಪಕ್ಷಕ್ಕೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಠಿಣ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರೆಸಿದ್ದಾರೆ. ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಕೆಲವು ದಿನಗಳ ಹಿಂದೆ ದೆಹಲಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.