
ಮೇ 10ರೊಳಗೆ ಸಂಪುಟ ಪುನಾರಚನೆ
ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರದ ಸಂಪುಟ ಪುನಾರಚನೆ ಇನ್ನು ಒಂದೆರಡು ದಿನಗಳಲ್ಲಿ ನಡೆಯಲಿದೆ. ಹೀಗಾಗಿ ಮೇ 11 ರಂದು ಗುರುವಾರ ಸಂಪುಟ ಸಭೆ ನಿಗದಿಯಾಗಿದೆ.
ಸಂಪುಟ ಪುನಾರಚನೆ ಸಂಬಂಧ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು. ಸಿಎಂ ಬೊಮ್ಮಾಯಿ ಅವರ ಜೊತೆ ಯಾರ್ಯಾರನ್ನು ಕೈ ಬಿಡಬೇಕು ಮತ್ತು ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಸಂಪುಟ ಪುನಾರಚನೆ ನಿರ್ಧಾರದೊಂದಿಗೆ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದರು. ಇನ್ನು ಎರಡು ಮೂರು ದಿನಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಂಗಳವಾರ ಹೇಳಿದ್ದರು.
ಸದ್ಯದಲ್ಲೇ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ, ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಮುಗಿಸಿ ಮರಳಿದ ಬಳಿಕ ಬದಲಾವಣೆಗಳು ಆಗಬಹುದು. ಮೇ 10 ರ ಮೊದಲು ಹೊಸ ಮಂತ್ರಿಗಳ ಪ್ರಮಾಣ ವಚನವು ನಡೆಯಲಿದೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿವೆ.
ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ್, ವಸತಿ ಸಚಿವ ವಿ.ಸೋಮಣ್ಣ, ಮಹಿಳಾ ಅಭಿವೃದ್ಧಿ, ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹಲವು ಕಾರಣಗಳಿಗಾಗಿ ಈ ಸಚಿವರನ್ನು ಸಂಪುಟದಿಂದ ಹೊರಗಿಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅಧಿಕೃತ ನಿವಾಸದಲ್ಲಿ ಅಮಿತ್ ಶಾಗೆ ಭೋಜನ ಕೂಟ: ಸಂಭಾವ್ಯ ಸಚಿವರ ದಂಡೇ ಆಗಮನ
ನಿಷ್ಠಾವಂತರಿಗೆ ಪಕ್ಷ ಸಂಘಟನೆ ಜವಾಬ್ದಾರಿ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಬಿಬಿಎಂಪಿ ಚುನಾವಣೆ ಹೊಣೆಗಾರಿಕೆ ನೀಡಲಾಗುವುದು ಎಂದು ತಿಳಿದು ಬಂದಿದೆ.
ಇನ್ನೂ ಸುಧಾಕರ್ ಅವರ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಿರುವುದರ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ, ಇನ್ನೂ ಇತ್ತೀಚೆಗಷ್ಟೆ ಸಚಿವ ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ತಪ್ಪು ಮಾಡಿದೆ ಎಂಬ ಹೇಳಿಕೆ ನೀಡಿದ್ದರು ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ ಎಂಟಿಬಿ ನಾಗರಾಜ್ ಬೆಲೆ ತೆತ್ತಲಿದ್ದಾರೆ.
ಪಿ ರಾಜೀವ್, ರಾಜುಗೌಡ, ಪ್ರೀತಂ ಗೌಡ, ಪೂರ್ಣಿಮಾ ಶ್ರೀನಿವಾಸ್, ಎನ್ ಮಹೇಶ್, ಅರವಿಂದ್ ಬೆಲ್ಲದ್, ಬಿ ವೈ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರ ಕೆಲವು ನಾಯಕರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸುಳಿವು ಇದೆ. ವಿಶೇಷವಾಗಿ ಗೃಹ ಖಾತೆಯ ಪುನರ್ರಚನೆಯೂ ಆಗಬಹುದು. ಸಂದರ್ಭಗಳನ್ನು ಸೂಕ್ಷ್ಮವಾಗಿ ನಿಭಾಯಿಸಬಲ್ಲ ಶಾಸಕರಿಗೆ ಗೃಹ ಖಾತೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆರ್ಡಿಪಿಆರ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಆಯಾ ನಾಯಕರಿಗೆ ಡಿಸಿಎಂ ಹುದ್ದೆಯನ್ನು ರಚಿಸಲು ಪಕ್ಷದ ಕಾರ್ಯಕರ್ತರಿಂದ ಬೇಡಿಕೆಯಿದೆ, ಆದರೆ ಹೈಕಮಾಂಡ್ ಈ ಬಗ್ಗೆ ಗಮನ ಹರಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.