ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಎಚ್ಚರಿಕೆ
ಸ್ವಪಕ್ಷ ವಿರುದ್ಧವೇ ಟೀಕೆಗಳನ್ನು ಮಾಡುತ್ತಾ, ಮನಸ್ಸಿಗೆ ಕಂಡಿದ್ದನ್ನು ನೇರವಾಗಿ ಹೇಳಿ ವಿವಾದಕ್ಕೀಡಾಗುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸರ್ಕಾರ ವಿರುದ್ಧ ಚಾಟಿ ಬೀಸಿದ್ದಾರೆ.ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಮತ್ತೆ ಸರ್ಕಾರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ.
Published: 06th May 2022 10:42 AM | Last Updated: 06th May 2022 12:59 PM | A+A A-

ಬಸನಗೌಡ ಪಾಟೀಲ್ ಯತ್ನಾಳ್
ರಾಮದುರ್ಗ (ಬೆಳಗಾವಿ): ಸ್ವಪಕ್ಷ ವಿರುದ್ಧವೇ ಟೀಕೆಗಳನ್ನು ಮಾಡುತ್ತಾ, ಮನಸ್ಸಿಗೆ ಕಂಡಿದ್ದನ್ನು ನೇರವಾಗಿ ಹೇಳಿ ವಿವಾದಕ್ಕೀಡಾಗುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸರ್ಕಾರ ವಿರುದ್ಧ ಚಾಟಿ ಬೀಸಿದ್ದಾರೆ.ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಮತ್ತೆ ಸರ್ಕಾರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ.
ರಾಮದುರ್ಗದಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಹಳಷ್ಟು ಸಾರಿ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಬೊಮ್ಮಾಯಿಯವರು ಹೇಳಿದ್ದಾರೆ. ಆದರೆ ನಾನು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ, ನನ್ನನ್ನು ಮಂತ್ರಿ ಮಾಡುವುದು ಬೇಡ ಎಂದು ಹೇಳಿದ್ದೇನೆ ಎಂದರು.
ಅರವಿಂದ್ ಬೆಲ್ಲದ್ ಅವರನ್ನು ಮಂತ್ರಿ ಮಾಡಬಾರದು ಎಂದು ಜಗದೀಶ್ ಶೆಟ್ಟರ್ ಶಂಕರ್ ಪಾಟೀಲ್ ಮುನೇನಕೊಪ್ಪ ಅವರನ್ನು ಮಾಡಿದರು. ನನ್ನ ಬದಲಿಗೆ ಸಿ ಸಿ ಪಾಟೀಲರನ್ನು ಯಡಿಯೂರಪ್ಪ ಮಂತ್ರಿ ಮಾಡಿದರು, ನಂತರ ಇನ್ನೊಬ್ಬರು ಕ್ಯಾಶ್ ಕ್ಯಾಂಡಿಟೇಟ್ ಮಂತ್ರಿ ಆದರು ಎಂದು ಸರ್ಕಾರದಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರವನ್ನು ಜನತೆ ಮುಂದೆ ಖುಲ್ಲಾಂಖುಲ್ಲ ಬಯಲಿಗೆಳೆದರು.
ಹಾಲಕ್ಕಿ ಸಮುದಾಯದವರಿಗೆ, ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ಸೌಲಭ್ಯ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿದ ಗಡುವುಗಳೆಲ್ಲವೂ ಮುಗಿದಿದೆ. ರಾಜ್ಯದಲ್ಲಿ ಹಲವು ಸಣ್ಣ ಸಮುದಾಯದವರಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಿಮ್ಮನ್ನು ಸಿಎಂ ಮಾಡ್ತೀವಿ, 2,500 ಕೋಟಿ ಕೊಡಿ ಅಂದ್ರು, ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣ: ಶಾಸಕ ಯತ್ನಾಳ್ ಹೊಸ ಬಾಂಬ್!
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಿದಿದ್ದರೆ ಯಡಿಯೂರಪ್ಪನ ಪರಿಸ್ಥಿತಿ ನಿಮಗೂ ಬರುವುದು ನಿಶ್ಚಿತ ಎಂದು ಬಸನಗೌಡ ಪಾಟೀಲ ಯತ್ನಾಳ್ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ 25 ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಜತೆಗೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಉಪವಾಸ ಮತ್ತು ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂದು ಮೀಸಲಾತಿ ನೀಡುವ ಭರವಸೆ ನೀಡಿ, ಮಾತು ತಪ್ಪಿದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ನೀವೂ ಮಾತು ಕೊಟ್ಟಿದ್ದೀರಿ ಎಂದು ನೆನಪಿಸಿದ ಯತ್ನಾಳ್, ನಾವು ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿ ಮೀಸಲಾತಿ ಕೇಳುತ್ತಿಲ್ಲ. ಇತರೆ ಸಣ್ಣ ಸಮಾಜಗಳಿಗೂ ಮೀಸಲಾತಿ ಪರಿಷ್ಕರಣೆ ಮಾಡುವುದು ಸೇರಿದೆ ಎಂದು ಸ್ಪಷ್ಟಪಡಿಸಿದರು.