ನಿಮ್ಮನ್ನು ಸಿಎಂ ಮಾಡ್ತೀವಿ, 2,500 ಕೋಟಿ ರೂ. ಕೊಡಿ ಅಂದ್ರು; ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣ: ಶಾಸಕ ಯತ್ನಾಳ್ ಹೊಸ ಬಾಂಬ್!
ಸ್ವಪಕ್ಷದವರ ವಿರುದ್ದ ಹರಿಹಾಯುವುದರಲ್ಲಿ, ಸ್ವಪಕ್ಷದವರ ಬಂಡವಾಳವನ್ನು ಖುಲ್ಲಂಖುಲ್ಲಾಗಿ ಹೇಳುವುದರಲ್ಲಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಸಿದ್ದಹಸ್ತರು. ಇದೀಗ ಮತ್ತೆ ಸಿಎಂ ಬೊಮ್ಮಾಯಿ ಆದಿಯಾಗಿ ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದಾರೆ.
Published: 06th May 2022 12:13 PM | Last Updated: 06th May 2022 01:01 PM | A+A A-

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಗೋಕಾಕ್: ಸ್ವಪಕ್ಷದವರ ವಿರುದ್ದ ಹರಿಹಾಯುವುದರಲ್ಲಿ, ಸ್ವಪಕ್ಷದವರ ಬಂಡವಾಳವನ್ನು ಖುಲ್ಲಂಖುಲ್ಲಾಗಿ ಹೇಳುವುದರಲ್ಲಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಸಿದ್ದಹಸ್ತರು. ಇದೀಗ ಮತ್ತೆ ಸಿಎಂ ಬೊಮ್ಮಾಯಿ ಆದಿಯಾಗಿ ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ರಾಜಕೀಯ ನಡೆಯುತ್ತಿದೆ ಎಂದು ಗೋಕಾಕ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಬಿಜೆಪಿಯ ಮಹಾನ್ ನಾಯಕರು, ಕಾಂಗ್ರೆಸ್ ನ ಡಿ ಕೆ ಶಿವಕುಮಾರ್, ಜೆಡಿಎಸ್ ನ ಕುಮಾರಸ್ವಾಮಿ ಮಧ್ಯೆ ಅಡ್ಜಸ್ಟ್ ಮೆಂಟ್ ರಾಜಕೀಯ. ರಾತ್ರಿ ಹೊತ್ತು ಈ ಎಲ್ಲ ನಾಯಕರು ಒಟ್ಟಿಗೆ ಮಾತನಾಡಿಕೊಳ್ಳುತ್ತಾರೆ, ಶಾಸಕರು ಹುಚ್ಚು ನಾಯಿಗಳು ಸರ್ ಸರ್ ಅಂತ ಅವರ ಹಿಂದೆ ಹೋಗುತ್ತಾರಷ್ಟೆ ಎಂದರು.
ರಮೇಶ್ ಜಾರಕಿಹೊಳಿಯವರು ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದಾರೆ, ಅವರ ವಿರುದ್ಧ ಸೆಕ್ಸ್ ಸಿಡಿ ಹೊರಬರಲು ಷಡ್ಯಂತ್ರ ಮಾಡಲಾಗಿದೆ. ಮೋಸ ಮಾಡಿದವರಲ್ಲಿ ಒಬ್ಬ ಮಹಾನ್ ನಾಯಕರ ಮಗ ಇದ್ದಾರೆ. ಅವರಿಗೆ ಮತ್ತೆ ಸಚಿವ ಸ್ಥಾನ ಕೊಡಬೇಕು. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಕಾರ್ಯಕ್ರಮ ಬರುತ್ತದೆ, ಅದರಿಂದ ನಮಗೆ ಖುಷಿಯಿದೆ ಎಂದರು.
ಸಿಎಂ ಪೋಸ್ಟ್ ಗೆ 2,500 ಕೋಟಿ ರೂ.: ಇನ್ನು ನಿನ್ನೆ ರಾಮದುರ್ಗದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್, 2500 ಕೋಟಿ ರೂಪಾಯಿ ಕೊಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ ಎಂದು ಆಫರ್ ಕೊಟ್ಟಿದ್ದರು ಎಂದು ಸಹ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಎಚ್ಚರಿಕೆ
ದೆಹಲಿಯಿಂದ ಬಂದವರು 2,500 ಕೋಟಿ ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂದಿದ್ರು. ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾ ನನ್ನ ಬಳಿ ಬಂದಿದ್ರು. ಆದ್ರೆ ನಾನು, 2,500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಹಣ ಹೆಂಗ್ ಇಡೋದು? ಏನು ಕೋಣೆಯಲ್ಲಿ ಇಡೋದಾ ಅಥವಾ ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದೆ ಎಂದರು.
ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡುತ್ತಾರೆ. ನಾನು ವಾಜಪೇಯಿಯವರ ಕೈಯಲ್ಲಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರಿತಿದ್ದರು ಎಂದು ನೆನಪಿಸಿಕೊಂಡರು.
ಬಿಜೆಪಿಯಲ್ಲಿ ರೊಕ್ಕ ಇದ್ದವರು ಮಂತ್ರಿ ಆಗ್ತಾರೆ, ರೊಕ್ಕ ತಗೊಂಡು ರೊಕ್ಕ ಕೊಟ್ಟು ಮಂತ್ರಿ ಆಗುತ್ತಾರೆ, ನಾನು ರೊಕ್ಕ ಕೊಡುವವನಲ್ಲ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ರೊಕ್ಕ ಕೊಟ್ಟು ಮಂತ್ರಿ ಆದ ಕ್ಯಾಂಡಿಡೇಟ್ ಎಂದು ಸಹ ಟೀಕಿಸಿದರು.