ಸಂಪುಟ ಪುನಾರಚನೆ ಸರ್ಕಸ್: ಪ್ರಧಾನಿ ಮೋದಿ ಆಗಮನದ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಮಹಾಪರ್ವ!
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಇದುವರೆಗೂ ಮುಖ್ಯಮಂತ್ರಿ ಮತ್ತು ರಕ್ಷದ ಹಿರಿಯ ನಾಯಕರಿಗೆ ಮಾಹಿತಿಯಿಲ್ಲ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.
Published: 07th May 2022 09:21 AM | Last Updated: 07th May 2022 02:22 PM | A+A A-

ಬಸವರಾಜ ಬೊಮ್ಮಾಯಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಯುರೋಪ್ ಪ್ರವಾಸದಿಂದ ಭಾರತಕ್ಕೆ ಮರಳಿದ್ದು, 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಹೈಕಮಾಂಡ್ ಏನೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ನೋಡಲು ಬಿಜೆಪಿ ನಾಯಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಇದುವರೆಗೂ ಮುಖ್ಯಮಂತ್ರಿ ಮತ್ತು ರಕ್ಷದ ಹಿರಿಯ ನಾಯಕರಿಗೆ ಮಾಹಿತಿಯಿಲ್ಲ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಗುಜರಾತ್ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಗುರುವಾರ ನವದೆಹಲಿ ತಲುಪಿದ್ದು, 2022ರ ಡಿಸೆಂಬರ್ನಲ್ಲಿ ಚುನಾವಣೆಗೆ ಮುಂದಾಗಿರುವ ರಾಜ್ಯದ ಪರಿಸ್ಥಿತಿಯ ಬಗ್ಗೆ ವಿವರಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಕರ್ನಾಟಕದ ಸಮಸ್ಯೆ ಮತ್ತು ಬೊಮ್ಮಾಯಿ ಸರ್ಕಾರದ ಪರಿಣಾಮಕಾರಿ ನೀತಿಗಳು ಹಾಗೂ ಪಕ್ಷದ ಪರಿಸ್ಥಿತಿಯನ್ನು ಬಿಎಲ್ ಸಂತೋಷ್ ಚರ್ಚಿಸಬಹುದು. ವಂಶರಾಜಕಾರಣವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಬಗ್ಗೆ ಸಂತೋಷ್ ಇತ್ತೀಚೆಗೆ ಮಾತನಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಅವಕಾಶ ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಕುಟುಂಬದ ಒಬ್ಬರಿಗೆ ಮಾತ್ರ ಟಿಕೆಟ್ ನೀಡುವುದಾಗಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೇ 10ರೊಳಗೆ ಸಂಪುಟ ಪುನಾರಚನೆ ನಿಶ್ಚಿತ: ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ
ಆದರೆ ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟ ಪುನಾರಚನೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ತಮ್ಮ ಬಜೆಟ್ ಭರವಸೆಗಳನ್ನು ಕಾರ್ಯಗತಗೊಳಿಸುವ ಸಂಬಂಧ ವಿವಿಧ ಇಲಾಖೆಗಳ ಸಭೆಗಳನ್ನು ನಡೆಸುತ್ತಿದ್ದಾರೆ.
ಬಿಜೆಪಿ ಹೈಕಮಾಂಡ್ ಮುಂದೆ ಸದ್ಯ ಹಲವು ಆಯ್ಕೆಗಳಿವೆ. 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆಯ ಗುಜರಾತ್ ಮಾದರಿ ಅಥವಾ ಅವಧಿ ಪೂರ್ವ ಚುನಾವಣೆ ಸೇರಿದಂತೆ ಹಲವು ಆಯ್ಕೆಗಳಿವೆ. ದಕ್ಷಿಣದ ಹೆಬ್ಬಾಗಿಲು ಕರ್ನಾಟಕದಲ್ಲಿ ಅಸ್ಥಿತ್ವ ಉಳಿಸಿಕೊಳ್ಳುವುದು ಪಕ್ಷಕ್ಕೆ ನಿರ್ಣಾಯಕ ಎನ್ನುತ್ತಾರೆ ರಾಜಕೀಯ ಪಂಡಿತರು.
ಪಕ್ಷವನ್ನು ಬಲಪಡಿಸಲು ಹಳೆ ಮೈಸೂರು ಭಾಗದ ಒಕ್ಕಲಿಗ ಭದ್ರಕೋಟೆಯಾದ ಮಂಡ್ಯದಲ್ಲಿ ಪಕ್ಷದ ಸಮಾವೇಶ ನಡೆಸುವ ಕುರಿತು ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ನವೆಂಬರ್ 2022 ರಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುಂಚಿತವಾಗಿ ಕರ್ನಾಟಕವು ಹೂಡಿಕೆಯ ತಾಣವಾಗಿದೆ ಎಂದು ಮನವರಿಕೆ ಮಾಡಲು ವಿವಿಧ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಲು ಸಿಎಂ ಬೊಮ್ಮಾಯಿ ಅವರು ಮೇ 10 ರಂದು ನವದೆಹಲಿಗೆ ಬರಲಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ. ಆದರೆ, ಸಂಪುಟ ಪುನಾರಚನೆ ಕುರಿತು ಚರ್ಚಿಸಲು ಅವರು ಪಕ್ಷದ ಹೈಕಮಾಂಡ್ಗೆ ಕರೆ ನೀಡುತ್ತಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.