2023ರ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ: ಬಿಜೆಪಿ ತೆಕ್ಕೆಗೆ ಕಾಂಗ್ರೆಸ್-ಜೆಡಿಎಸ್ ಪ್ರಮುಖ ನಾಯಕರು!
ಮುಂದಿನ ವಿಧಾನಸಭೆ ಚುನಾವಣೆ ಗೆಲುವಿನ ದೃಷ್ಟಿಯಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷ ವಿಸ್ತರಣೆ, ಬಲವರ್ಧನೆಗೆ ಒತ್ತು ನೀಡಬೇಕೆಂಬ ವರಿಷ್ಠರ ಸೂಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ.
Published: 08th May 2022 12:04 PM | Last Updated: 08th May 2022 12:04 PM | A+A A-

ಬಿಜೆಪಿ ಸೇರಿದ ಕಾಂಗ್ರೆಸ್--ಜೆಡಿಎಸ್ ನಾಯಕರು
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಗೆಲುವಿನ ದೃಷ್ಟಿಯಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷ ವಿಸ್ತರಣೆ, ಬಲವರ್ಧನೆಗೆ ಒತ್ತು ನೀಡಬೇಕೆಂಬ ವರಿಷ್ಠರ ಸೂಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ.
ಕಾಂಗ್ರೆಸ್ನ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ. ಕೃಷ್ಣಮೂರ್ತಿ, ಜೆಡಿಎಸ್ನ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್, ಮಾಜಿ ಐಆರ್ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ಗೌಡ, ಮಾಲೂರಿನ ಮಾಜಿ ಶಾಸಕ ಮಂಜುನಾಥ ಗೌಡ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಂಡ್ಯ ಜಿಲ್ಲಾ ಮುಖಂಡ ಅಶೋಕ್ ಜಯರಾಮ್ ಶನಿವಾರ ಬಿಜೆಪಿ ಸೇರ್ಪಡೆಯಾದರು.
ಅಚ್ಚರಿಯ ಬೆಳವಣಿಗೆಯಲ್ಲಿ ಶನಿವಾರ ಮಧ್ಯಾಹ್ನವಷ್ಟೇ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಂಜೆ ಬಿಜೆಪಿ ಸೇರಿದರು. ಆ ಮೂಲಕ ಕರಾವಳಿ ಭಾಗದಲ್ಲಿ ಕಾಂಗ್ರೆಸ್ನ ಪ್ರಮುಖರೊಬ್ಬರು ಕಮಲ ಪಾಳೆಯ ಸೇರಿದಂತಾಗಿದೆ
ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇಶದಲ್ಲಿ ಮೋದಿ ಯುಗ ಆರಂಭವಾಗಿದೆ. ಅವರ ಜನಪರ ಆಡಳಿತದ ಜತೆಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತವನ್ನು ಮೆಚ್ಚಿಕೊಂಡು ಅನೇಕ ಮುಖಂಡರು ಪಕ್ಷ ಸೇರುತ್ತಿದ್ದಾರೆ. ದೇಶ ರಕ್ಷಿಸಲು ನರೇಂದ್ರ ಮೋದಿಯವರ ನೇತೃತ್ವ ಮತ್ತು ರಾಜ್ಯದಲ್ಲಿ ಬೊಮ್ಮಾಯಿಯವರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ಜನರ ಬಯಕೆಯಾಗಿದೆ ಎಂದರು.
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ವಿರೋಧ ಪಕ್ಷಗಳ ಅನೇಕ ನಾಯಕರು ತಮ್ಮನ್ನು ಸಂಪರ್ಕಿಸಿದ್ದಾರೆ ಮತ್ತು ಪಕ್ಷಕ್ಕೆ ಸೇರಲು ಆಸಕ್ತಿ ತೋರಿಸಿದ್ದಾರೆ. "ನಾನು ಅವರಿಗೆ ಕಾಯಲು ಸಲಹೆ ನೀಡಿದ್ದೇನೆ ಮತ್ತು ಸರಿಯಾದ ಸಮಯದಲ್ಲಿ ಅವರನ್ನು ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿಪಕ್ಷಗಳ ನಾಯಕರು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದ್ದರೆ, ಇತರರು ತಮ್ಮೊಳಗೆ ಖಾತೆಗಳನ್ನು ಹಂಚಿಕೊಂಡಿದ್ದಾರೆ ಎಂದು ಬೊಮ್ಮಾಯಿ ಲೇವಡಿ ಮಾಡಿದರು.
“ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಬ್ಬರೂ ಚುನಾವಣಾ ತಂತ್ರವನ್ನು ರೂಪಿಸಿದ ಹಿನ್ನೆಲೆಯಲ್ಲಿ ಹಲವು ಪಕ್ಷಗಳ ನಾಯಕರು ಬಿಜೆಪಿ ಸೇರುತ್ತಿದ್ದಾರ. ವಿರೋಧ ಪಕ್ಷಗಳು ಇನ್ನೂ ಗೊಂದಲದಲ್ಲಿರುವಾಗ, ಆದರೆ ಬಿಜೆಪಿ ಈಗಾಗಲೇ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದೆ ”ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಪಕ್ಷಕ್ಕೆ ಸೇರ್ಪಡೆಗೊಳ್ಳಲು ಇನ್ನೂ ಕೆಲವು ನಾಯಕರು ಉತ್ಸುಕರಾಗಿದ್ದಾರೆ. ಮೊದಲ ಹಂತದಲ್ಲಿ ಹಳೆ ಮೈಸೂರು ಮತ್ತು ಉಡುಪಿ ಭಾಗದ ನಾಯಕರನ್ನು ಸೇರ್ಪಡೆಗೊಳಿಸಲಾಗಿದೆ. ಮುಂದೆ ಇತರ ಪ್ರದೇಶಗಳ ನಾಯಕರನ್ನು ಸೇರಿಸಿಕೊಳ್ಳಲಾಗುವುದು. ಶೀಘ್ರದಲ್ಲೇ ರಾಜ್ಯದಲ್ಲಿ ‘ಬಿಜೆಪಿ ಪರ್ವ’ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.