ದಳಪತಿಗಳ ಪ್ರಾಬಲ್ಯದ ಹಳೇ ಮೈಸೂರಿಗೆ ಬಿಜೆಪಿ ಲಗ್ಗೆ: ಒಂದೊಂದಾಗಿ ಉದುರುತ್ತಿವೆ ಜೆಡಿಎಸ್ ವಿಕೆಟ್? ರೈತರ ವೋಟ್ ಬ್ಯಾಂಕ್ ಗೆ 'ಎಎಪಿ' ಕತ್ತರಿ!
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಲು ಮುಂದಾಗಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಹೊಡೆತ ಬೀಳುವ ಸಾಧ್ಯತೆಯಿದೆ.
Published: 10th May 2022 09:45 AM | Last Updated: 10th May 2022 12:58 PM | A+A A-

ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಜೆಡಿಎಸ್ ನಾಯಕರು
ಮೈಸೂರು: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಲು ಮುಂದಾಗಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಹೊಡೆತ ಬೀಳುವ ಸಾಧ್ಯತೆಯಿದೆ.
ಜೆಡಿಎಸ್ ಜೊತೆ ಅಸಮಾಧಾನ ಹೊಂದಿರುವ ತಳಮಟ್ಟದ ಕಾರ್ಯಕರ್ತರು ಮತ್ತು ನಾಯಕರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಕೆಸಿ ನಾರಾಯಣಗೌಡರಿಂದ ಆರಂಭವಾದ ಕಮಲದ ಆಪರೇಷನ್ ಇನ್ನೂ ಮುಂದುವರಿದಿದೆ. ಪಕ್ಷಾಂತರ ಮಾಡಿದ ನಾರಾಯಣಗೌಡ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ.
ಹಳೇ ಮೈಸೂರು ಭಾಗದತ್ತ ಸಂಪೂರ್ಣ ಗಮನ ಕೇಂದ್ರೀಕರಿಸಿರುವ ಬಿಜೆಪಿ ಈ ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಬಯಸಿದೆ, ಹೀಗಾಗಿ ಸೂಕ್ಷ್ಮ ಮಟ್ಟದ ರಾಜಕೀಯದ ಮೇಲೆ ಗಮನ ಕೇಂದ್ರೀಕರಿಸಿದೆ. ಒಕ್ಕಲಿಗರ ಹೃದಯ ಭಾಗದಲ್ಲಿ ಜೆಡಿಎಸ್ ಭದ್ರ ನೆಲೆ ಹೊಂದಿದ್ದರೂ ಪಕ್ಷದ ಪ್ರಮುಖರನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಹಲವು ಶಾಸಕರು ಸೇರಿದಂತೆ ಸ್ಥಳೀಯರು ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ: ದಳದ ಮತ್ತೊಂದು ವಿಕೆಟ್ ಪತನ? ಜೆಡಿಎಸ್ ನಲ್ಲಿ ನಿತ್ಯವೂ ಕಿರುಕುಳ ಹಿಂಸೆ-ಮರಿತಿಬ್ಬೇಗೌಡ
ಲಿಂಗಾಯತ ಮುಖಂಡ ಹಾಗೂ ಉತ್ತರ ಕರ್ನಾಟಕ ಪ್ರಮುಖ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಅವರಿಗೆ ಪಕ್ಷ ಸೂಕ್ತ ಪ್ರಾಮುಖ್ಯತೆ ನೀಡಿದ್ದರೂ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. ಇನ್ನೂ ಕೋನ ರೆಡ್ಡಿ ಕೂಡ ಕಮಲ ಹಿಡಿಯಲು ಮುಂದಾಗಿದ್ದಾರೆ. ಚಾಮುಂಡೇಶ್ವರಿ ಶಾಸಕ ಜಿ ಟಿ ದೇವೇಗೌಡರಂತೆಯೇ ಜೆಡಿಎಸ್ ಕೋಲಾರ ಶಾಸಕ ಶ್ರೀನಿವಾಸಗೌಡ ಕೂಡ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಕಳೆದ ವಾರ ಬಿಜೆಪಿ ಸೇರಿದ್ದಾರೆ.
ಇನ್ನೂ ಜೆಡಿಎಸ್ ಹಿರಿಯ ಶಾಸಕ ಶಿವಲಿಂಗೇಗೌಡ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಅತ್ಯಾಪ್ತ ವೈಎಸ್ ವಿ ದತ್ತ ಪದೇ ಪದೇ ಸಿದ್ದರಾಮಯ್ಯ ಮನೆಗೆ ಭೇಟಿ ನೀಡುತ್ತಿರುವುದು ಜೆಡಿಎಸ್ ಗೆ ಆತಂಕ ಉಂಟು ಮಾಡಿದೆ. ಕರ್ನಾಟಕದ ರಾಜಕೀಯ ವಲಯಕ್ಕೆ ಆಮ್ ಆದ್ಮಿ ಪಕ್ಷದ ಪ್ರವೇಶ ಮತ್ತು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೆಜ್ರಿವಾಲ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಜೆಡಿಎಸ್ ರೈತ ವೋಟ್ ಬ್ಯಾಂಕ್ಗೆ ಕತ್ತರಿ ಬೀಳಬಹುದು.
ಇದನ್ನೂ ಓದಿ: ಸಂಕೀರ್ಣ ರಾಜಕೀಯದಲ್ಲಿ ಎಎಪಿ ಮುಂದಿರುವ ಸವಾಲು: ಕಾಂಗ್ರೆಸ್ -ಜೆಡಿಎಸ್ ಪ್ರಾಬಲ್ಯ ಹತ್ತಿಕ್ಕಲು ಬೇಕು ಪ್ಯಾನ್ ಕರ್ನಾಟಕ ಲೀಡರ್ಸ್!
ಮತದಾರರಿಗೆ ಉಚಿತ ಶಿಕ್ಷಣ, ಆರೋಗ್ಯ, ಮನೆ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡುವ ಮಿಷನ್ 123 ಮತ್ತು ನವರತ್ನ ಕಾರ್ಯಕ್ರಮಗಳನ್ನು ಜೆಡಿಎಸ್ ಹೊಂದಿದೆ, ಆದರೆ 90 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಳೇ ಮೈಸೂರು ಭಾಗದಲ್ಲಿ ತನ್ನ ದಿಗ್ಗಜರನ್ನು ಉಳಿಸಿಕೊಳ್ಳುವುದೇ ಜೆಡಿಎಸ್ ಗೆ ಸವಾಲಾಗಿದೆ.
ಪಕ್ಷಕ್ಕೆ ಮುಸ್ಲಿಂ ಮತಗಳ ಅಗತ್ಯವಿದೆ ಎಂದು ತಿಳಿದ ಜೆಡಿಎಸ್ ವರಿಷ್ಠ ದೇವೇಗೌಡರು ಒಂದು ಕಾಲದ ಆಪ್ತರಾಗಿದ್ದ ಸಿಎಂ ಇಬ್ರಾಹಿಂ ಅವರನ್ನು ಕರೆತಂದಿದ್ದಾರೆ. ಪಕ್ಷಕ್ಕೆ ಕಾಯಕಲ್ಪ ನೀಡಲು ಮತ್ತಷ್ಟು ಪ್ರಮುಖರ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.