ಬಿ.ಎಲ್ ಶಂಕರ್ ಕಾಂಗ್ರೆಸ್ ಗೆ ಹೋಗಿ ಏನಾದ್ರು? ಪಕ್ಷಕ್ಕೆ ಡ್ಯಾಮೇಜ್ ಮಾಡಲು ಹೋದರೆ ಅವರೇ ಬೀದಿಪಾಲಾಗುತ್ತಾರೆ: ಎಚ್ ಡಿಕೆ
ಹಣ ಇದ್ದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಮರಿತಿಬ್ಬೇಗೌಡ ಆರೊಪ ವಿಚಾರವಾಗಿ ಮಾತನಾಡಿದ ಅವರು ಪಕ್ಷವನ್ನ ಉಳಿಸಲು ನಾವು ಹಲವು ಭಾರಿ ತಲೆ ಕೊಟ್ಟಿದ್ದೇವೆ. ಮರಿತಿಬ್ಬೇಗೌಡ ಮಾತನಾಡಿರೋದನ್ನ ಗಮನಿಸಿದ್ದೇನೆ. ನಮ್ಮಪಕ್ಷಕ್ಕೆ ಅವರು ಎಷ್ಟು ಹಣ ಸಂದಾಯ ಮಾಡಿದ್ದಾರೆ.
Published: 10th May 2022 01:38 PM | Last Updated: 10th May 2022 01:46 PM | A+A A-

ಎಚ್.ಡಿ ಕುಮಾರಸ್ವಾಮಿ
ನೆಲಮಂಗಲ: ಮಂಡ್ಯ ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಕುಟುಂಬದವರ ನಿರ್ಧಾರವೇ ಕಾರಣ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾತ್ಯತೀತ ಜನತಾ ದಳದ ಮುಖಂಡ ಹೆಚ್.ಡಿ. ಕುಮಾರಸ್ವಾಮಿ ಅವರು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ನೆಲಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾನು ಕಾರ್ಯಕರ್ತರಿಂದಾಗಿ ನಿಖಿಲ್ ಸೋತಿದ್ದ ಅಂತಾ ಹೇಳಿದ್ದೇನಾ? ನಾನು ಎಲ್ಲೂ ಕಾರ್ಯಕರ್ತರ ವಿರುದ್ಧ ಆಪಾದನೆ ಮಾಡಿಲ್ಲ. ಚುನಾವಣೆ ನಡೆದು ಮೂರು ವರ್ಷಗಳಾಗಿವೆ. ಈಗ ಯಾಕೆ ಆ ವಿಚಾರದ ಬಗ್ಗೆ ಚರ್ಚಿಸಬೇಕು. ನಿಖಿಲ್ ಗೆ ನಾನೇ ಚುನಾವಣೆಗೆ ನಿಲ್ಲಬೇಡ, ಒತ್ತಡಗಳಿಗೆ ಮಣಿಯಬೇಡ ಅಂತಾ ಹೇಳಿದ್ದೆ. ಆದರೆ, ಮಂಡ್ಯ ಜಿಲ್ಲೆಯ ಶಾಸಕರ ಒತ್ತಾಯದ ಕಾರಣ ಸ್ಪರ್ಧಿಸಿದರು. ನಿಖಿಲ್ ಕುಮಾರಸ್ವಾಮಿಯೇ ನಿಲ್ಲಬೇಕೆಂದು ಎಂಟೂ ಶಾಸಕರು ಒತ್ತಾಯಿಸಿದ್ದರು. ಶಾಸಕರ ಒತ್ತಾಯಕ್ಕೆ ತಲೆಬಾಗಿ ನಿಲ್ಲಿಸಬೇಕಾಯಿತು ಎಂದು ಹೇಳಿದರು.
ಹಣ ಇದ್ದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಮರಿತಿಬ್ಬೇಗೌಡ ಆರೊಪ ವಿಚಾರವಾಗಿ ಮಾತನಾಡಿದ ಅವರು ಪಕ್ಷವನ್ನ ಉಳಿಸಲು ನಾವು ಹಲವು ಭಾರಿ ತಲೆ ಕೊಟ್ಟಿದ್ದೇವೆ. ಮರಿತಿಬ್ಬೇಗೌಡ ಮಾತನಾಡಿರೋದನ್ನ ಗಮನಿಸಿದ್ದೇನೆ. ನಮ್ಮಪಕ್ಷಕ್ಕೆ ಅವರು ಎಷ್ಟು ಹಣ ಸಂದಾಯ ಮಾಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾಗ ಎಷ್ಟು ನೀಡಿದ್ದಾರೆ. ಯಾವ ನಾಯಕರಿಗೆ ಹಣ ಸಂದಾಯ ಮಾಡಿದ್ದರು. ಕುಮಾರಸ್ವಾಮಿಗೆ ಕೊಟ್ರೋ, ದೇವೇಗೌಡರಿಗೆ ಕೊಟ್ರೋ, ಇಲ್ಲವೇ ಜನತಾದಳದ ಅಕೌಂಟ್ ಗೆ ಕೊಟ್ಟಿದ್ದಾರೋ? ಎಂದು ಪ್ರಶ್ನಿಸಿದ ಅವರು ಮರಿತಿಬ್ಬೇಗೌಡರ ಚುನಾವಣಾ ಖರ್ಚು ವೆಚ್ಚಕ್ಕೆ ಪಕ್ಷದಿಂದ ಎಷ್ಟು ಕೊಟ್ಟಿದ್ದೇವೆ, ಇದೆಲ್ಲದರ ಬಗ್ಗೆ ಅವರು ಸತ್ಯ ಹೇಳುತ್ತಾರಾ? ಎಂದರು.
ಈ ರೀತಿಯ ಕ್ಷುಲ್ಲಕವಾದ ಹೇಳಿಕೆಗಳ ಬಗ್ಗೆ ಜನರೇ ತೀರ್ಮಾನಿಸುತ್ತಾರೆ. ಕೆಲವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಪಕ್ಷಕ್ಕೆ ಡ್ಯಾಮೇಜ್ ಮಾಡಲು ಹೋದರೆ ಅವರೇ ಬೀದಿಪಾಲಾಗುತ್ತಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬಿ.ಎಲ್ ಶಂಕರ್ ಕಾಂಗ್ರೆಸ್ ಗೆ ಹೋಗಿ ಏನಾದ್ರು? ಇಪ್ಪತ್ತು ವರ್ಷವಾಯ್ತು ಅಲ್ಲಿ ಏನಾಗಿದ್ದಾರೆ? ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಪಕ್ಷವೇ ಹೊಸ ನಾಯಕತ್ವವನ್ನ ಹುಟ್ಟು ಹಾಕಲಿದೆ ಎಂದರು.
ಇದನ್ನೂ ಓದಿ: ದಳದ ಮತ್ತೊಂದು ವಿಕೆಟ್ ಪತನ? ಜೆಡಿಎಸ್ ನಲ್ಲಿ ನಿತ್ಯವೂ ಕಿರುಕುಳ, ಹಿಂಸೆ- ಮರಿತಿಬ್ಬೇಗೌಡ
ಎಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಪ್ರಶ್ನಿಸಿದ ಅವರು ಎಲ್ಲ ಪಕ್ಷಗಳಲ್ಲೂ ಇದೆಯಲ್ಲಾ. ಡಿ.ಕೆ ಶಿವಕುಮಾರ್ಕು ಟುಂಬದಲ್ಲಿ ಬೇರೆ ಯಾರೂ ರಾಜಕೀಯದಲ್ಲಿ ಇಲ್ಲವಾ? ಅವರು ಏನು ಕೆಲಸ ಮಾಡಿದ್ದಾರೆ ಸತೀಶ್ ಜಾರಕಿಹೊಳಿ, ಯಡಿಯೂರಪ್ಪ, ಉದಾಸಿ, ಜೊಲ್ಲೆ ಕುಟುಂಬದಲ್ಲಿ ಇಲ್ಲವಾ? ಎಂದರು.
ಇದೇ ಸಂದರ್ಭದಲ್ಲಿ ಅವರು ಮೇ ೧೩ರಂದು ನೆಲಮಂಗಲದಲ್ಲಿ ಜೆಡಿಎಸ್ ನಡೆಸಲಿರುವ ಸಮಾವೇಶದ ಮಾಹಿತಿ ನೀಡಿದರು. ಹದಿನೈದು ಕಳಸಗಳೊಂದಿಗೆ ವಾಹನಗಳು ಬೆಂಗಳೂರಿಗೆ ಬಂದಿವೆ. ೧೮೦ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಬಂದಿವೆ. ಅಂತಿಮವಾಗಿ ಇದೇ ತಿಂಗಳ ೧೩ರಂದು ಸಮಾರೋಪ ಸಮಾರಂಭ ನಡೆಯಲಿದೆ. ಬೆಂಗಳೂರು ನಗರದಲ್ಲೇ ಸಮಾವೇಶ ನಡೆಸಬೇಕೆಂದುಕೊಂಡಿದ್ದೆವು. ಆದರೆ, ಬೆಂಗಳೂರಿನ ಜನರಿಗೆ ಅನಾನುಕೂಲವಾಗಬಾರದು ಎಂಬ ಕಾರಣಕ್ಕೆ ನೆಲಮಂಗಲದ ಬಳಿ ಮಾಡುತ್ತಿದ್ದೇವೆ. ಅಂದು ಮಧ್ಯಾಹ್ನ ೩ ರಿಂದ ೬ ಗಂಟೆಯವರೆಗೆ ಸಮಾವೇಶ ನಡೆಯಲಿದೆ ಎಂದು ಹೇಳಿದರು.