2023ರ ವಿಧಾನಸಭೆ ಚುನಾವಣೆ: ಮಹಿಳಾ ಮತದಾರರ ಓಲೈಕೆಗೆ 'ನಾ ನಾಯಕಿ' ಕಾರ್ಯಕ್ರಮಕ್ಕೆ ಕಾಂಗ್ರೆಸ್ ಚಾಲನೆ!
2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಈ ಕಾರ್ಯಕ್ರಮ ನಡೆಸಲು ಮುಂದಾಗಿದೆ. 'ನಾ ನಾಯಕಿ' (ಐ ಯಾಮ್ ಲೀಡರ್) ಪ್ರಾರಂಭಿಸಲು ಸಜ್ಜಾಗಿದೆ.
Published: 11th May 2022 10:19 AM | Last Updated: 11th May 2022 12:40 PM | A+A A-

ಪ್ರಿಯಾಂಕಾ ಗಾಂಧಿ
ಬೆಂಗಳೂರು: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ನಡೆಸಿದ 'ಲಡ್ಕಿ ಹೂ, ಲಾಡ್ ಸಕ್ತಿ ಹೂ' ಅಭಿಯಾನ ನಡೆಸಿತ್ತು.
2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಈ ಕಾರ್ಯಕ್ರಮ ನಡೆಸಲು ಮುಂದಾಗಿದೆ. 'ನಾ ನಾಯಕಿ' (ಐ ಯಾಮ್ ಲೀಡರ್) ಪ್ರಾರಂಭಿಸಲು ಸಜ್ಜಾಗಿದೆ. ಮೇ ತಿಂಗಳಲ್ಲಿ ಕಾರ್ಯಕ್ರಮ ಆರಂಭಿಸುವ ಸಾಧ್ಯತೆಯಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಡಿಸೆಂಬರ್ 2021 ರಲ್ಲಿ ಉತ್ತರ ಪ್ರದೇಶದಲ್ಲಿ ಪ್ರಚಾರವನ್ನು ಪ್ರಿಯಾಂಕಾ ಗಾಂಧಿ ವಹಿಸಿದ್ದರು. ಕರ್ನಾಟಕ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಟ್ರಾನ್ಸ್ಜೆಂಡರ್ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರನ್ನು ಮಹಿಳೆಯರನ್ನು ತಲುಪಲು 'ನಾ ನಾಯಕಿ' ಅಭಿಯಾನದ ರಾಜ್ಯ ಸಂಚಾಲಕರನ್ನಾಗಿ ಮಾಡಲಾಗಿದೆ.
ಈ ಅಭಿಯಾನವು ಕರ್ನಾಟಕದಲ್ಲಿ 3 ಕೋಟಿಗೂ ಅಧಿಕ ಮಹಿಳಾ ಜನಸಂಖ್ಯೆಯನ್ನು ಗುರಿಯಾಗಿಸಲಿದೆ. ಮಹಿಳಾ ಮತದರಾರರು ಕೂಡ ನಿರ್ಣಾಯಕರಾಗಿದ್ದಾರೆ. ಈ ಅಭಿಯಾನದ ಮೂಲಕ, ನಾವು ಎಲ್ಲಾ ಕ್ಷೇತ್ರಗಳ ಮಹಿಳೆಯರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದ್ದೇವೆ, ಪಂಚಾಯತ್ ಮಟ್ಟದಿಂದಲೇ ರೈತ ಮುಖಂಡರು, ದಲಿತ ಮುಖಂಡರು, ಪಂಚಾಯತ್ ಸದಸ್ಯರು, ಧಾರ್ಮಿಕ ಮುಖಂಡರು, ಆಶಾ ಕಾರ್ಯಕರ್ತರು ಮತ್ತು ಇನ್ನೂ ಅನೇಕರನ್ನು ನಾವು ಈ ಮೂಲಕ ತಲುಪಲಿದ್ದೇವೆ ಎಂದು ಅಕ್ಕೈ ಪದ್ಮಶಾಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಮೂಲಕ 78 ಲಕ್ಷ ಸದಸ್ಯತ್ವ ನೋಂದಣಿ: ರಾಜ್ಯದಲ್ಲಿ ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್
ನಾವು ಪ್ರತಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇವೆ. ಪ್ರದೇಶದ ಮಹಿಳೆಯರೊಂದಿಗೆ ಸಂವಹನ ನಡೆಸುತ್ತೇವೆ, ಅವರ ಬೇಕು ಬೇಡಗಳನ್ನು ಆಲಿಸಿ, ಅವರ ಅಹವಾಲುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಏಕಕಾಲಕ್ಕೆ ಎರಡರಿಂದ ನಾಲ್ಕು ಕಡೆ ಪ್ರಚಾರ ನಡೆಯಲಿದ್ದು, ಸ್ಥಳೀಯ ಶಾಸಕರು, ಎಂಎಲ್ ಸಿಗಳು ಹಾಗೂ ಇತರೆ ಮುಖಂಡರು ಭಾಗವಹಿಸಲಿದ್ದಾರೆ. “ನಾವು ಮುಂದಿನ ನಾಲ್ಕು ತಿಂಗಳಲ್ಲಿ ಅಭಿಯಾನ ಪೂರ್ಣಗೊಳಿಸುತ್ತೇವೆ. ನಾವು ಎಲ್ಲಾ 224 ವಿಧಾನಸಭಾ ಸ್ಥಾನಗಳಲ್ಲಿ ಮಹಿಳೆಯರನ್ನು ತಲುಪುತ್ತೇವೆ ಎಂದು ತಿಳಿಸಿದ್ದಾರೆ. ಮೇ ಮೂರನೇ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪ್ರಿಯಾಂಕಾ ಗಾಂಧಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.