ಕಾಂಗ್ರೆಸ್ ನ 'ಒಂದು ಕುಟುಂಬಕ್ಕೆ ಒಂದೇ ಟಿಕೆಟ್’ ನಿಯಮದಿಂದ ಯುವ ನಾಯಕರಿಗೆ ಬೂಸ್ಟರ್!
'ಒಂದು ಕುಟುಂಬಕ್ಕೆ ಒಂದೇ ಟಿಕೆಟ್’ ಎಂಬ ನಿಯಮವನ್ನು ಕಾಂಗ್ರೆಸ್ ಪಕ್ಷವು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಒಂದೇ ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ‘ಅಸಾಧಾರಣ ರೀತಿ’ಯಲ್ಲಿ ಕೆಲಸ ಮಾಡಿದ್ದರೆ ಅಂಥವರಿಗೆ ಈ ನಿಯಮದಿಂದ ವಿನಾಯಿತಿ ಇದೆ.
Published: 14th May 2022 10:10 AM | Last Updated: 14th May 2022 10:10 AM | A+A A-

ಕಾಂಗ್ರೆಸ್ ಚಿಂತನ ಶಿಬಿರ
ಮೈಸೂರು: 'ಒಂದು ಕುಟುಂಬಕ್ಕೆ ಒಂದೇ ಟಿಕೆಟ್’ ಎಂಬ ನಿಯಮವನ್ನು ಕಾಂಗ್ರೆಸ್ ಪಕ್ಷವು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಒಂದೇ ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ‘ಅಸಾಧಾರಣ ರೀತಿ’ಯಲ್ಲಿ ಕೆಲಸ ಮಾಡಿದ್ದರೆ ಅಂಥವರಿಗೆ ಈ ನಿಯಮದಿಂದ ವಿನಾಯಿತಿ ಇದೆ.
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಈ ಪ್ರಸ್ತಾವವನ್ನು ಶುಕ್ರವಾರ ಮುಂದಿಡಲಾಗಿದೆ. ನಿಯಮಕ್ಕೆ ಕಾಂಗ್ರೆಸ್‌ನಲ್ಲಿ ಸಂಪೂರ್ಣ ಸಹಮತವಿದೆ. ಚಿಂತನ ಶಿಬಿರದ ನಂತರ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಸಾಂಸ್ಥಿಕ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಸಾರ್ವಜನಿಕವಾಗಿ, ಖಾಸಗಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹಿಂಜರಿಯುವ ಕೆಲ ನಾಯಕರು ಪಕ್ಷದ ಈ ನೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ. "ಒಂದು ಕುಟುಂಬ, ಒಂದು ಟಿಕೆಟ್" ನೀತಿಯು ವಿಶೇಷವಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಬೂಸ್ಟರ್ ಆಗಲಿದೆ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ಸ್ವಜನಪಕ್ಷಪಾತಕ್ಕೆ ಕಡಿವಾಣ ಬೀಳುತ್ತದೆ ಮತ್ತು ಪಕ್ಷವನ್ನು ಪುನರುಜ್ಜೀವನಗೊಳಿಸಲು ಬಲವಾದ ಸಂದೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಉದಾಹರಣೆಗೆ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಮನೂರು ಶಿವ ಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕೃಷ್ಣಪ್ಪ ಮತ್ತು ಪುತ್ರ- ಪ್ರಿಯಾ ಕೃಷ್ಣ, ಲಕ್ಷ್ಮಿ ಹೆಬ್ಬಾಳ್ಕರ್, ಅಜಯ್ ಸಿಂಗ್ ಸೇರಿದಂತೆ 15ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಧಾನಸಭೆ ಚುನಾವಣೆಗೆ ಎರಡು ಟಿಕೆಟ್ ಪಡೆಯಲು ವಿಫಲರಾದವರು ವಿಧಾನ ಪರಿಷತ್ತಿಗೆ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಇಲ್ಲವೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಆಕಾಂಕ್ಷಿಗಳ ಪಕ್ಷಾಂತರಕ್ಕೆ ಕಾರಣವಾಗಿದೆ. ಎರಡು ದಶಕಗಳ ಕಾರ್ಯಕರ್ತರ ಶ್ರಮವನ್ನು ಕಡೆಗಣಿಸಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನೇ ಕಣಕ್ಕಿಳಿಸುವಲ್ಲಿ ಸಚಿವರು ಯಶಸ್ವಿಯಾಗಿದ್ದರು.
ಕೆಲವು ಆಯ್ದ ಕುಟುಂಬಗಳು 223 ಸ್ಥಾನಗಳಲ್ಲಿ 30 ರಿಂದ 50 ಸ್ಥಾನಗಳನ್ನು ಪಡೆದರೆ ಅಥವಾ ಅವರ ವಾರ್ಡ್‌ಗಳಲ್ಲಿ ಅವರ ಕುಟುಂಬಸ್ಥರೇ ಟಿಕೆಟ್ ಪಡೆದರೆ, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಳೆಯುತ್ತದೆ ಎಂದು ಪಕ್ಷದ ಮುಖ್ಯಸ್ಥರು ಹೇಗೆ ನಿರೀಕ್ಷಿಸುತ್ತಾರೆ ಎಂದು ಯುವ ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.
ಮಾಜಿ ಶಾಸಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಹಿಮಂತ ಬಿಸ್ವಾ ಶರ್ಮಾ ಮತ್ತು ಇತರ ಪ್ರಭಾವಿ ನಾಯಕರನ್ನು ಪಕ್ಷವು ಕಳೆದುಕೊಂಡಿದೆ. ಹಾಗಾಗಿ, 2024ರ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಪುನರುಜ್ಜೀವನಕ್ಕೆ ಹಾನಿಯುಂಟುಮಾಡುವ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ದ್ರೋಹ ಆಗದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ತಪ್ಪಿಸಬೇಕು ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ್ , ‘ಒಂದು ಕುಟುಂಬ, ಒಂದೇ ಟಿಕೆಟ್’ ಎಂಬ ಚರ್ಚೆ ಉತ್ತಮ ನಡೆಯಾಗಿದ್ದು, ಇದು ಪಕ್ಷವನ್ನು ಬಲಪಡಿಸುತ್ತದೆ. “ನನ್ನ ಮಗನನ್ನು ರಾಜಕೀಯಕ್ಕೆ ಪರಿಚಯಿಸಬೇಕಾದರೆ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ” ಎಂದು ಅವರು ಹೇಳಿದರು
ಒಂದು ಕುಟುಂಬ, ಒಂದು ಟಿಕೆಟ್ ಚರ್ಚೆಯು ಪಕ್ಷವನ್ನು ಪ್ರಜಾಪ್ರಭುತ್ವಗೊಳಿಸುವತ್ತ ಒಂದು ಹೆಜ್ಜೆಯಾಗಿದೆ. ಗುಣಾತ್ಮಕ, ರಚನಾತ್ಮಕ ಬದಲಾವಣೆಗಳಿಗೆ ಇದರಿಂದ ನಾಂದಿ ಹಾಡಬಹುದು ಎಂದು ರಾಜಕೀಯ ವಿಮರ್ಶಕ ಪ್ರೊ.ಮುಸಾಫರ್ ಅಜಾಸಿ ಅವರು ಅಭಿಪ್ರಾಯ ಪಟ್ಟಿದ್ದಾರೆ.