ಜೆಡಿಎಸ್ ಜನತಾ ಜಲಧಾರೆ ಸಮಾರೋಪ: ಇಬ್ಬರು ಶಾಸಕರು ಗೈರು
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ತವರು ಕ್ಷೇತ್ರದಿಂದ ಇಬ್ಬರು ಶಾಸಕರು ಹಾಜರಾಗಿರುವುದು ಕಂಡು ಬಂದಿತ್ತು.
Published: 14th May 2022 08:47 AM | Last Updated: 14th May 2022 08:47 AM | A+A A-

ದೇವೇಗೌಡ
ಹಾಸನ: ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ತವರು ಕ್ಷೇತ್ರದಿಂದ ಇಬ್ಬರು ಶಾಸಕರು ಹಾಜರಾಗಿರುವುದು ಕಂಡು ಬಂದಿತ್ತು.
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಅವರು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು.
ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಜತೆಗಿನ ಭಿನ್ನಾಭಿಪ್ರಾಯದಿಂದ ಶಿವಲಿಂಗೇಗೌಡ ಎರಡು ತಿಂಗಳಿಂದ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಶಿವಲಿಂಗೇಗೌಡ ಅವರು ಶೀಘ್ರದಲ್ಲಿಯೇ ಕಾಂಗ್ರೆಸ್'ಗೆ ಸೇರ್ಪಡೆಗೊಳ್ಳಲಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ನಿಂದ ಟಿಕೆಟ್ ಪಡೆದು, ಕಣಕ್ಕಿಳಿಯಲಿದ್ದಾರೆಂದು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಹಿರಿಯ ನಾಯಕರ ಧೋರಣೆ ಮತ್ತು ರಾಜಕೀಯದಿಂದ ಹತಾಶೆಗೊಂಡಿರುವ ರಾಮಸ್ವಾಮಿ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಇಬ್ಬರು ಶಾಸಕರು ಪಕ್ಷದ ಕಾರ್ಯಕ್ರಮಗಳಿಗೆ ಗೈರು ಹಾಜರಾಗುತ್ತಿರುವ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಹೆಚ್'ಡಿ.ರೇವಣ್ಣ ಅವರು, ಅನಿವಾರ್ಯ ಕಾರಣದಿಂದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಬರುವುದಿಲ್ಲ. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ರ್ಯಾಲಿಗೆ ಕಳುಹಿಸುವುದಾಗಿ ಈಗಾಗಲೇ ಶಿವಲಿಂಗೇಗೌಡ ಮತ್ತು ರಾಮಸ್ವಾಮಿ ಸ್ಪಷ್ಟನೆ ನೀಡಿದ್ದಾರೆಂದು ಹೇಳಿದ್ದರು.
ಶುಕ್ರವಾರ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ‘ಜನತಾ ಜಲಧಾರೆ’ ಕಾರ್ಯಕ್ರಮ ಅದ್ಧೂರಿಯಾಗಿ ಸಮಾಪ್ತಿಯಾಯಿತು. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದು, ಹಾಸನ ಜಿಲ್ಲೆಯಿಂದಲೇ 2,000ಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಾಸನದ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಗಳಿದ್ದ ಹಿನ್ನೆಲೆಯಲ್ಲಿ ಜನರಿಗೆ ಹಾಗೂ ಕಾರ್ಯಕರ್ತರಿಗೆ ಸಮಸ್ಯೆಯಾಗದಂತೆ ಅವರನ್ನು ತಮ್ಮ ತಮ್ಮ ಸ್ಥಳಗಳಿಗೆ ಕೊಂಡೊಯ್ಯಲು ಜೆಡಿಎಸ್ ನಾಯಕರು 450 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಿದ್ದರು.