ಹಣಕಾಸು ಅಂಕಿ-ಅಂಶಗಳ ತಿರುಚುವ ಕೆಟ್ಟ ಸಾಹಸಕ್ಕೆ ಸರ್ಕಾರ ಮುಂದಾಗಿದೆ: ಸಿದ್ದರಾಮಯ್ಯ
ಭಾರತದ ಆರ್ಥಿಕತೆಯ ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಹೇಳಿದ್ದಾರೆ.
Published: 16th May 2022 08:10 AM | Last Updated: 16th May 2022 01:10 PM | A+A A-

ಸಿದ್ದರಾಮಯ್ಯ
ಉದಯಪುರ/ಬೆಂಗಳೂರು: ಭಾರತದ ಆರ್ಥಿಕತೆಯ ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರದಲ್ಲಿ ಆರ್ಥಿಕತೆ ಕುರಿತು ವಿಚಾರ ಮಂಡಿಸಿದ ಅವರು, ಜನರಿಗೆ ಸತ್ಯಾಂಶ ತಿಳಿಯದಂತೆ ಅಂಕಿಅಂಶಗಳನ್ನು ತಿರುಚುವ ಕೆಟ್ಟ ಸಾಹಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿದ್ದು, ಈ ನೀತಿ ಆಯೋಗವು ಬಿಜೆಪಿ ಸರ್ಕಾರಕ್ಕೆ ಅಗತ್ಯವಿರುವ ಅಂಕಿಅಂಶಗಳನ್ನು ಸಿದ್ಧಪಡಿಸುವ ಕೆಲಸವನ್ನು ಮಾಡುತ್ತಿದೆ. ನ್ಯಾಯಬದ್ಧ ಸಮೀಕ್ಷೆಗಳನ್ನು ನಿಲ್ಲಿಸಲಾಗಿದೆ. ಬಡತನ, ಹಸಿವು, ಉದ್ಯೋಗಕ್ಕೆ ಸಂಬಂಧಿಸಿದ ಸಮೀಕ್ಷೆಯನ್ನು ಎನ್ಎಸ್ಎಸ್ಒ ಸಂಸ್ಥೆ ನಡೆಸಿ ವಾಸ್ತವಾಂಶದ ವರದಿ ನೀಡುತ್ತಿತ್ತು. 2017-18ರಲ್ಲಿ ಸಮೀಕ್ಷೆ ನಡೆಸಿ ವರದಿ ಕೊಟ್ಟಿದ್ದರೂ ಮೋದಿಯವರ ಸರಕಾರ ಅದು ಬಿಡುಗಡೆಯಾಗದಂತೆ ನೋಡಿಕೊಂಡಿತು. ವಿಶ್ವ ಬ್ಯಾಂಕ್ ಅಂಕಿ, ಅಂಶದಂತೆ 2004ರಲ್ಲಿ ಭಾರತದ ಒಟ್ಟು ಜಿಡಿಪಿ 0.7 ಟ್ರಿಲಿಯನ್ ಡಾಲರ್ನಷ್ಟಿತ್ತು. ಯುಪಿಎ ಅವಧಿಯಲ್ಲಿ ಇದು 2.04 ಟ್ರಿಲಿಯನ್ ಡಾಲರ್ಗೆ ಏರಿಕೆಯಾಯಿತು. 2019ರಲ್ಲಿ 2.87 ಟ್ರಿಲಿಯನ್ ಡಾಲರ್ ಇದ್ದದ್ದು 2020ರಲ್ಲಿ 2.62 ಟ್ರಿಲಿಯನ್ ಡಾಲರ್ಗೆ ಕುಸಿಯಿತು. 2021ರಲ್ಲಿ 2.71 ಟ್ರಿಲಿಯನ್ ಡಾಲರ್ನಷ್ಟಿದೆ. ಎಲ್ಲವೂ ಸರಿಯಾಗಿದ್ದರೆ 2022ರಲ್ಲಿ 2.88 ಟ್ರಿಲಿಯನ್ ಡಾಲರ್ ನಷ್ಟಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
“ಜನರು ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಧ್ವನಿ ಎತ್ತದ ಹೊರತು ದೇಶವು ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ಕೇಂದ್ರ ಸರ್ಕಾರದ ವಿತ್ತೀಯ ನೀತಿ ರಾಜ್ಯಗಳ ಆರ್ಥಿಕತೆಯನ್ನು ಹಾಳು ಮಾಡುತ್ತಿದೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ.
ಮಾರ್ಚ್ 2014 ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳ ಸಾಲವು 24.71 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು, ಆದರೆ ಮಾರ್ಚ್ 2022 ರ ಹೊತ್ತಿಗೆ ಅದು 70 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. 2022ರಲ್ಲಿ ಮಾಡಿದ ಸಾಲವನ್ನು ಸೇರಿಸಿದರೆ ಈ ಮೊತ್ತ ಸುಮಾರು 80 ಲಕ್ಷ ಕೋಟಿ ರೂ ಆಗಿದೆ. ರಾಜ್ಯಗಳ ವಿತ್ತೀಯ ಕೊರತೆಯೂ ಹೆಚ್ಚುತ್ತಿದೆ ಎಂದು ಪ್ರತಿಪಾದಿಸಿದರು.
2012-17ರಿಂದ ನೋಟು ಅಮಾನ್ಯೀಕರಣದವರೆಗೆ 14 ಪ್ರಮುಖ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳು ಮಾತ್ರ ವಿತ್ತೀಯ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿತ್ತು. ಆದರೆ, 2021-22ರಲ್ಲಿ ಎರಡು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು ವಿತ್ತೀಯ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.