ದಲಿತರ ಓಲೈಕೆಗಾಗಿ ಕಾಂಗ್ರೆಸ್ ಜಾಗೃತಿ ಸಮಾವೇಶ: ಆರ್. ಧರ್ಮಸೇನಾ
ಸಮಾವೇಶವನ್ನು ರಾಜ್ಯಮಟ್ಟದಲ್ಲಿ ಮಾಡಲಿದ್ದು, ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಪಕ್ಷದ ನಾಯಕರ ಜೊತೆ ಚರ್ಚಿಸಲಾಗುವುದು. ದೊಡ್ಡ ಮಟ್ಟದ ದಲಿತ ಸಮಾವೇಶಕ್ಕೆ ಕೇಂದ್ರದ ನಾಯಕರನ್ನು ಆಹ್ವಾನಿಸುತ್ತೇವೆ ಎಂದು ಧರ್ಮಸೇನಾ ಹೇಳಿದರು.
Published: 17th May 2022 10:35 AM | Last Updated: 17th May 2022 12:59 PM | A+A A-

ಆರ್. ಧರ್ಮಸೇನಾ
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜನ್ಮದಿನ ಪ್ರಯುಕ್ತ ಜಾಗೃತಿ ಸಮಾವೇಶ ಮಾಡಲು ತೀರ್ಮಾನಿಸಿದ್ದೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಸ್ಸಿ ವಿಭಾಗದ ಅಧ್ಯಕ್ಷ ಆರ್ ಧರ್ಮಸೇನಾ ತಿಳಿಸಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 18ರಂದು ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಮಾಡಲಿದ್ದೇವೆ ಎಂದರು.ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಡಾ.ಜಿ. ಪರಮೇಶ್ವರ್, ಕೆ ಹೆಚ್ ಮುನಿಯಪ್ಪ, ಕಾರ್ಯಾಧ್ಯಕ್ಷ ಧ್ರುವನಾರಾಯಣ, ಸಂಸದ ಎಲ್ ಹನುಮಂತಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಾವೇಶವನ್ನು ರಾಜ್ಯಮಟ್ಟದಲ್ಲಿ ಮಾಡಲಿದ್ದು, ನಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಪಕ್ಷದ ನಾಯಕರ ಜೊತೆ ಚರ್ಚಿಸಲಾಗುವುದು. ದೊಡ್ಡ ಮಟ್ಟದ ದಲಿತ ಸಮಾವೇಶಕ್ಕೆ ಕೇಂದ್ರದ ನಾಯಕರನ್ನು ಆಹ್ವಾನಿಸುತ್ತೇವೆ ಎಂದು ಧರ್ಮಸೇನಾ ಹೇಳಿದರು.
ಇದನ್ನೂ ಓದಿ: ಕಹಿ ಮರೆತು ಪರಸ್ಪರ ನಗೆ ಚೆಲ್ಲಿದ ಪಾಟೀಲ್ - ಡಿಕೆಶಿ: ಗುಡ್ ಜಾಬ್ ಸುರ್ಜೆವಾಲಾ ಎಂದ ರಮ್ಯಾ!
ಕರ್ನಾಟಕದಲ್ಲಿ ದಲಿತರಾದ ಡಾ. ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ದಲಿತರನ್ನು ಉಪಮುಖ್ಯಮಂತ್ರಿ ಮಾಡಿದ ಕಾರಣಕ್ಕೆ, ಈಗ ಬಿಜೆಪಿ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದೆ ಎಂದು ಧರ್ಮಸೇನಾ ಹೇಳಿದ್ದಾರೆ.
ದಲಿತ ಸಿಎಂ ಆಗಲು ಸಾಧ್ಯವಿಲ್ಲ ಎಂಬ ಆನೇಕಲ್ ನಾರಾಯಣಸ್ವಾಮಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾರಾಯಣಸ್ವಾಮಿ ಅರ್ಹರಿದ್ದು, ಅವರೇ ಆಗಬಹುದಲ್ಲವೇ? ಮೊದಲು ಅವರು ಸದಾಶಿವ ಆಯೋಗ ಜಾರಿ ಮಾಡುತ್ತಿವೆ ಎಂದು ಹೇಳಿರುವ ಮಾತನ್ನು ಉಳಿಸಿಕೊಳ್ಳಲಿ. ನಂತರ ದಲಿತ ಸಿಎಂ ವಿಚಾರವಾಗಿ ಮಾತನಾಡಲಿ ಎಂದರು.