ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ; ಕಾಂಗ್ರೆಸ್- ಬಿಜೆಪಿಗೆ ಬೆಂಬಲವಿಲ್ಲ: ಎಚ್ ಡಿಕೆ
ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಜೆಡಿಎಸ್ ಸಮಾನ ಅಂತರ ಕಾಯ್ದುಕೊಳ್ಳಲಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
Published: 18th May 2022 11:40 AM | Last Updated: 18th May 2022 01:21 PM | A+A A-

ಎಚ್.ಡಿ ಕುಮಾರಸ್ವಾಮಿ
ಮೈಸೂರು: ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಜೆಡಿಎಸ್ ಸಮಾನ ಅಂತರ ಕಾಯ್ದುಕೊಳ್ಳಲಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೇರೆ ಪಕ್ಷಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಜೆಡಿಎಸ್ಗೆ ಕೆಲವೇ ಮತಗಳ ಕೊರತೆಯಿದ್ದರೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹೆಚ್ಚುವರಿ ಮತಗಳನ್ನು ಹೊಂದಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಅವರು ನಿರ್ಧರಿಸಬೇಕು ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಹಲವು ಮುಖಂಡರು ವಿಧಾನಪರಿಷತ್ ಏಕೈಕ ಸ್ಥಾನದ ಆಕಾಂಕ್ಷಿಗಳಾಗಿದ್ದು, ಒಂದೆರಡು ದಿನಗಳಲ್ಲಿ ಜೆಡಿಎಸ್ ಸಂಸದೀಯ ಮಂಡಳಿ ಸಭೆ ಸೇರಿ ಅಭ್ಯರ್ಥಿ ನಿರ್ಧರಿಸಲಿದೆ ಎಂದರು.
ಬೇರೆ ಪಕ್ಷಗಳಿಂದ ಜೆಡಿಎಸ್ಗೆ ಸೇರುವವರಿಗೆ ಪಕ್ಷದಿಂದ ಸ್ಥಾನ, ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿದ ಅವರು, ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಜೆಡಿಎಸ್ನ ಹಲವು ನಾಯಕರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಕಾಂಗ್ರೆಸ್ ಮತ್ತು ಬಿಜೆಪಿ ಹೇಳಿಕೆಗಳ ಬಗ್ಗೆ, ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಇಬ್ಬರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ ಮತ್ತು ಗೊಂದಲ ಸೃಷ್ಟಿಸಲು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಮತ್ತೆ ಕಣಕ್ಕೆ
ಬೆಂಗಳೂರಿನಲ್ಲಿ ಜನತಾ ಜಲಧಾರೆ ಸಮಾವೇಶ ನಡೆಸುವ ಮೂಲಕ ಜೆಡಿಎಸ್ ತನ್ನ ಶಕ್ತಿ ಸಾಬೀತುಪಡಿಸಿದ್ದು, 123 ಸ್ಥಾನ ಗಳಿಸುವ ವಿಶ್ವಾಸ ಗಳಿಸಿದೆ ಎಂದರು. ಹಳೆಯ ಪಿಂಚಣಿ ಯೋಜನೆ ಕುರಿತು ವರದಿ ಸಲ್ಲಿಸಲು ತಮ್ಮ ಸರ್ಕಾರ ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಿತ್ತು, ಆದರೆ ಪ್ರಸಕ್ತ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇತರ ರಾಜ್ಯಗಳಂತೆ ಹಳೆಯ ಪಿಂಚಣಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಮತ್ತು ನಿರುದ್ಯೋಗಿ ಪದವೀಧರರಿಗೆ ಪದವಿ ನಂತರ ಮೊದಲ ಮೂರು ವರ್ಷ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಅವರು ಹೇಳಿದರು.
ಹಣಕಾಸಿನ ಹಿನ್ನಲೆಯಲ್ಲಿ ರಾಮು ಅವರನ್ನು ಪರಿಷತ್ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದೆ ಎಂಬ ಜೆಡಿಎಸ್ ಎಂಎಲ್ ಸಿ ಮರಿತಿಬ್ಬೇಗೌಡ ಅವರ ಆರೋಪವನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಶಾಸಕರ ಅಭಿಪ್ರಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಜಯಶಾಲಿಯಾಗಲಿದ್ದು, ನಾಲ್ಕೂ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ಪದವೀಧರ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು. ಉದಯಪುರದ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷವು ಒಂದೇ ಕುಟುಂಬ, ಒಂದೇ ಟಿಕೆಟ್ ನೀತಿಯನ್ನು ಘೋಷಿಸಿದ್ದು, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನೀತಿಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದು ತಮಾಷೆಯಾಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.