ಪಕ್ಷದ ಬಲ ಹೆಚ್ಚಿಸಲು 123 ವಾಹನ ಖರೀದಿಸಿದ ಜೆಡಿಎಸ್: ಬಿಜೆಪಿ ಟೀಕೆ, ಹೆಚ್'ಡಿಕೆ ತಿರುಗೇಟು
ಪಂಚರತ್ನ ಯೋಜನಗಳ ಪ್ರಚಾರಕ್ಕೆ 123 ಟಾಟಾ ಏಸ್ ವಾಹನಗಳ ಖರೀದಿ ಮಾಡಿದ ಜೆಡಿಎಸ್'ನ್ನು ಬಿಜೆಪಿ ಟೀಕಿಸಿದ್ದು, ಈ ಟೀಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.
Published: 19th May 2022 10:03 AM | Last Updated: 19th May 2022 01:07 PM | A+A A-

ಹೆಚ್.ಡಿ.ಕುಮಾರಸ್ನಾಮಿ
ಬೆಂಗಳೂರು: ಪಂಚರತ್ನ ಯೋಜನಗಳ ಪ್ರಚಾರಕ್ಕೆ 123 ಟಾಟಾ ಏಸ್ ವಾಹನಗಳ ಖರೀದಿ ಮಾಡಿದ ಜೆಡಿಎಸ್'ನ್ನು ಬಿಜೆಪಿ ಟೀಕಿಸಿದ್ದು, ಈ ಟೀಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.
ಜನತಾ ಜಲಧಾರೆ ಯಶಸ್ಸಿನ ಬೆನ್ನಲ್ಲೇ ಜೆಡಿಎಸ್ ಪಕ್ಷವು ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಪ್ರಚಾರಕ್ಕೆ ಚಾಲನೆ ನೀಡಿದ್ದು, ಇದಕ್ಕಾಗಿ ಸುಮಾರು 40 ದಿನಗಳ ಕಾಲ ರಾಜ್ಯದಾದ್ಯಂತ ಸಂಚಾರ ಮಾಡಲು ಎಲ್ಇಡಿ ಪರದೆಗಳನ್ನು ಹೊಂದಿರುವ 123 ವಾಹನಗಳ ಖರೀದಿ ಮಾಡಿದೆ.
ಬುಧವಾರ ಈ 123 ವಾಹನಗಳನ್ನು ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಜೆಡಿಎಶ್ ಶಾಸಂಕಾರ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹಸ್ತಾಂತರ ಮಾಡಿದರು, ಈ ವಾಹನಗಳಿಗೆ ಕುಮಾರಸ್ವಾಮಿಯವರು ಪೂಜೆ ಸಲ್ಲಿಸಿದರು.
ಈ ಕುರಿತು ಸರಣಿ ಟ್ಟೀಟ್ ಮಾಡಿದ್ದ ಬಿಜೆಪಿ, ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ, ನಿಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಶುಭವಾಗಲಿ. ಆದರೆ ಜೆಡಿಎಸ್ ಪಕ್ಷದ ಪಂಚರತ್ನ ಎಂದರೆ ಜನ ಬೇರೆಯದೇ ಮಾತನಾಡುತ್ತಾರೆ. √ ದೇವೇಗೌಡ √ ರೇವಣ್ಣ √ ಕುಮಾರಸ್ವಾಮಿ √ ಪ್ರಜ್ವಲ್ ರೇವಣ್ಣ √ ನಿಖಿಲ್ ಕುಮಾರಸ್ವಾಮಿ ಇವರೇ ಜೆಡಿಎಸ್ ಪಂಚರತ್ನಗಳು. ಐದು ಕ್ಷೇತ್ರದ ಗೆಲುವೇ ಪಂಚರತ್ನ ಯೋಜನೆಯೇ? ಎಂದು ಪ್ರಶ್ನಿಸಿತ್ತು.
ಜೆಡಿಎಸ್ ಪಕ್ಷ ಹೇಳಿಕೊಳ್ಳುತ್ತಿರುವ ಮಿಶನ್ 123 ವಾಸ್ತವದಲ್ಲಿ ಮಿಶನ್ 123 ಅಲ್ಲ, ಅದು ಮಿಶನ್ 1+2+3! 1 – ದೇವೇಗೌಡ 2 – ಕುಮಾರ ಸ್ವಾಮಿ, ರೇವಣ್ಣ 3 – ಅನಿತಾ, ಪ್ರಜ್ವಲ್, ಸೂರಜ್ 1+2+3=6, ಅಂದರೆ ದೇವೇಗೌಡ ಕುಟುಂಬದ ಗೆಲುವೇ ಪಕ್ಷದ ಗೆಲುವೇ? ಇದು ಕುಟುಂಬವಾದ ಅಲ್ಲದೆ ಮತ್ತೇನು?...
ಇದನ್ನೂ ಓದಿ: ಜೆಡಿಎಸ್ ‘ಪಂಚರತ್ನ ಕಾರ್ಯಕ್ರಮ’ಕ್ಕಾಗಿ ಕುಮಾರಸ್ವಾಮಿಗೆ 123 ಎಲ್ ಇಡಿ ವಾಹನಗಳ ಹಸ್ತಾಂತರ
123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಬೀಗುವ ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ, 123 ಕ್ಷೇತ್ರಗಳಿಗೆ ನಿಮ್ಮ ಪಕ್ಷದಿಂದ ಅಭ್ಯರ್ಥಿಗಳು ಸಿಗಬಹುದೇ? ನಿಮ್ಮ ವಂಶಾಡಳಿತದಿಂದ ಬೇಸತ್ತು ವಲಸೆ ಹೋಗುವವರ ಸಂಖ್ಯೆಯೇ ಇದರ ಕಾಲು ಭಾಗದಷ್ಟಿದೆ. ಹೀಗಿರುವಾಗ ಜೆಡಿಎಸ್ ನಾಮಾವಶೇಷವಾಗುವುದರಲ್ಲಿ ಸಂಶಯವಿದೆಯೇ? ಎಂದು ಹೇಳಿತ್ತು.
ಈ ಟ್ವೀಟ್'ಗೆ ಸಿಡಿಮಿಡಿಗೊಂಡಿರುವ ಕುಮಾರಸ್ವಾಮಿಯವರು, ಹೌದು, ಜೆಡಿಎಸ್ ನಲ್ಲಿ ಪಂಚರತ್ನಗಳಿವೆ. ಬಿಜೆಪಿಯಲ್ಲಿ ಸೀಡಿರತ್ನಗಳು, ಶೇ.40 ಕಮಿಷನ್ ರತ್ನಗಳು, ಜನರ ಹಣದ ಲೂಟಿ ರತ್ನಗಳು, ಕಾಸಿಗಾಗಿ ಕೆಲಸ ಮಾರಿಕೊಳ್ಳುವ ರತ್ನಗಳು, ಪಿಎಸ್ಐ ಕಿಂಗ್ ಪಿನ್ ರತ್ನಗಳು, ಮಾಧ್ಯಮಗಳ ವಿರುದ್ಧ ಕೋರ್ಟ್ ತಡೆಯಾಜ್ಞೆ ತಂದ ರತ್ನಗಳು, ಸದನದಲ್ಲೇ ನೀಲಿ ಚಿತ್ರ ನೋಡಿದ ರತ್ನಗಳು ಕೂಡ ಇವೆ ಅಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
ಕುಟುಂಬ ವಾದ, ಹೋದ ಕಡೆಯೆಲ್ಲ ಸುಖವಾದದಲ್ಲಿ ತೇಲಿ ತೆವಳುವ ಬಿಜೆಪಿಯೆ ಸುಖ ಸಿದ್ಧಾಂತಕ್ಕೆ ರಣರೋಚಕ ಇತಿಹಾಸವೇ ಇದೆ. ಜೆಡಿಎಸ್ ನಲ್ಲಿ 1+2+3 ಸಂಖ್ಯಾಬಲ ಇದೆ, ಸರಿ. ಆದರೆ, ಭಾರೀ ಕುಳಗಳ ಸಂಖ್ಯೆಯಲ್ಲಿ 1+2/1+2+3 ಲೆಕ್ಕವೇ ಇಲ್ಲ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಅದರ ಗರ್ಭಗುಡಿಯಲ್ಲಿ 1+2/1+2+3ಗಳ ಕುಟುಂಬ ಶಿಶುಗಳೇ ತುಂಬಿವೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ನಿರಾಣಿ, ಜಾರಕಿಹೊಳಿ, ಜೊಲ್ಲೆ, ಒಂದಾ ಎರಡಾ? ಪಟ್ಟಿ ಮಾಡುತ್ತಾ ಹೋದರೇ ಅದೇ ಹನುಮನ ಬಾಲ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ ಭಾರೀ ಮಳೆಗೆ ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಅನಾಹುತಗಳ ಕುರಿತು ಬಿಜೆಪಿ ಸಚಿವರ ವಿರುದ್ಧ ಕುಮಾರಸ್ವಾಮಿಯವರು ಕಿಡಿಕಾರಿದ್ದಾರೆ.
ಒಂದು ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಬೆಂಗಳೂರು ತತ್ತರಿಸಿದೆ. 'ಬಿಜೆಪಿ ಎಂಬ ಬುರುಡೆ ಪಾರ್ಟಿ 'ಮಳೆ ಬಗ್ಗೆ, ಜನರ ಕಷ್ಟದ ಬಗ್ಗೆ ಕೇಳುವುದು ಬಿಟ್ಟು, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.