ರಾಮನಗರ: ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾಯ್ತಾ ಜಟಾಪಟಿ? ಡಿಕೆಶಿಗೆ ಬಾಲಕೃಷ್ಣ ಪತ್ರ!
ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರಕ್ಕಾಗಿ ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಎಂ. ರೇವಣ್ಣ ಹಾಗೂ ಹೆಚ್. ಸಿ. ಬಾಲಕೃಷ್ಣ ನಡುವೆ ಕೋಲ್ಡ್ ವಾರ್ ಶುರುವಾಗಿರುವುದು ಬೆಳಕಿಗೆ ಬಂದಿದೆ.
Published: 20th May 2022 03:19 PM | Last Updated: 20th May 2022 03:44 PM | A+A A-

ಹೆಚ್.ಎಂ. ರೇವಣ್ಣ, ಹೆಚ್ ಸಿ ಬಾಲಕೃಷ್ಣ
ಮಾಗಡಿ: ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರಕ್ಕಾಗಿ ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಎಂ. ರೇವಣ್ಣ ಹಾಗೂ ಹೆಚ್. ಸಿ. ಬಾಲಕೃಷ್ಣ ನಡುವೆ ಕೋಲ್ಡ್ ವಾರ್ ಶುರುವಾಗಿರುವುದು ಬೆಳಕಿಗೆ ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಎದುರು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದ ಹೆಚ್.ಸಿ. ಬಾಲಕೃಷ್ಣ ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಗೆಲಲ್ಲೇ ಬೇಕೆಂದು ತೊಡೆ ತಟ್ಟಿ ನಿಂತಿದ್ದು, ಮಾಗಡಿಯಲ್ಲಿಯೇ ಮನೆ ಮಾಡಿ, ನಿರಂತರವಾಗಿ ಜನರ ಸಂಪರ್ಕದಲ್ಲಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ದೇವಸ್ಥಾನ ಜೀರ್ಣೋದ್ಧಾರ, ಹಬ್ಬ, ಹರಿದಿನ, ಮದುವೆ, ಗೃಹ ಪ್ರವೇಶ ಮತ್ತಿತರ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಈಗಿನಿಂದಲೇ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇವರಿಗೆ ಪೈಪೋಟಿ ನೀಡುವಂತೆ ಜೆಡಿಎಸ್ ಶಾಸಕ ಮಂಜುನಾಥ್ ಕೂಡಾ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಬಾರಿಯೂ ಗೆಲ್ಲುವ ಹಠಕ್ಕೆ ಬಿದಿದ್ದಾರೆ.
ಈ ಮಧ್ಯೆ ಹಿರಿಯ ಕಾಂಗ್ರೆಸ್ ನಾಯಕ ಹೆಚ್. ಎಂ. ರೇವಣ್ಣ ಜೆಡಿಎಸ್ ಶಾಸಕರ ಬಗ್ಗೆ ಹೊಗಳುತ್ತಿರುವುದು ಬಾಲಕೃಷ್ಣ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
''25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಕೆಲವು ಕಾರಣಗಳಿಂದ ಜೆಡಿಎಸ್ ತೊರೆದಿದ್ದು ಗೊತ್ತೇ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದು, ಕಾಯ, ವಾಚಾ, ಮನಸ್ಸಿನಿಂದ ಕಾಂಗ್ರೆಸ್ ಗಾಗಿ ದುಡಿಯುತ್ತಿದ್ದೇನೆ. ಹೆಚ್.ಎಂ. ರೇವಣ್ಣ ಅವರು ಪಕ್ಷದಲ್ಲಿ ಹಿರಿಯರು. ಮಾಗಡಿ ಕ್ಷೇತ್ರದ ಮೇಲೆ ಅಭಿಮಾನ ಇರುವವರು. ಆದರೆ, ಜೆಡಿಎಸ್ ಶಾಸಕರ ಬಗ್ಗೆ ಪದೇ ಪದೇ ಕ್ಷೇತ್ರದಲ್ಲಿ ಹೊಗಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿದೆ. ರೇವಣ್ಣ ಅವರಿಗೆ ಮಾಗಡಿ ಕ್ಷೇತ್ರದ ಮೇಲೆ ಆಸೆ ಇರಬಹುದು. ಹಾಗಾಗಿ ಅವರಿಗೆ ಟಿಕೆಟ್ ನೀಡಿ, ನಾನು ಅವರ ಪರವಾಗಿ ಕೆಲಸ ಮಾಡ್ತೇನೆ ಎಂದು ಪತ್ರದಲ್ಲಿ ವ್ಯಂಗವ್ಯಾಗಿ ಬಾಲಕೃಷ್ಣ ಆಕ್ರೋಶ ಹೊರಹಾಕಿದ್ದಾರೆ.
ಮಾಗಡಿಗೂ ವ್ಯಾಪಿಸಿದ ಡಿಕೆಶಿ, ಸಿದ್ದು ಕೋಲ್ಡ್ ವಾರ್: ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಕೋಲ್ಡ್ ವಾರ್ ಮಾಗಡಿ ಕ್ಷೇತ್ರಕ್ಕೂ ವ್ಯಾಪಿಸಿದೆ. ಹೆಚ್.ಎಂ. ರೇವಣ್ಣ ಸಿದ್ದು ಬೆಂಬಲಿಗರಾದರೆ, ಹೆಚ್.ಸಿ. ಬಾಲಕೃಷ್ಣ ಡಿಕೆಶಿ ಆಪ್ತರು, ನೆಂಟರು ಕೂಡಾ ಆಗಿದ್ದಾರೆ. ಹೆಚ್.ಸಿ. ಬಾಲಕೃಷ್ಣ ಕಾಂಗ್ರೆಸ್ ಸೇರಲು ಡಿಕೆಶಿಯೇ ಕಾರಣ. ನಾಲ್ಕು ಬಾರಿ ಶಾಸಕರಾದರೂ ಒಂದು ಬಾರಿಯೂ ಸಚಿವರಾಗದ ನಿರಾಸೆಯಲ್ಲಿರುವ ಹೆಚ್.ಸಿ. ಬಾಲಕೃಷ್ಣ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಡಿಕೆಶಿ ಸಿಎಂ ಆಗ್ತಾರೆ. ಸಚಿವ ಸ್ಥಾನ ಗ್ಯಾರಂಟಿ ಎಂಬ ಮಹತ್ವಕಾಂಕ್ಷೆಯಿಂದ ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡುತ್ತಿದ್ದಾರೆ.
ಕಳೆದ ವರ್ಷ ಹೆಚ್.ಎಂ. ರೇವಣ್ಣ ಕೂಡಾ ಬಾಲಕೃಷ್ಣ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಸಂಬಂಧಿತ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಇಬ್ಬರೂ ಪಾಲ್ಗೊಳ್ಳುತ್ತಿದ್ದರು. ಆದರೆ, ಚುನಾವಣೆ ಹೊಸ್ತಿಲಿನಲ್ಲಿ ಇಬ್ಬರ ನಡುವೆ ಟಿಕೆಟ್ ವಿಚಾರದಲ್ಲಿ ಕೋಲ್ಡ್ ವಾರ್ ಶುರುವಾಗಿರುವುದು ಬೆಳಕಿಗೆ ಬಂದಿದ್ದು, ಮುಂದೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.