2023ರ ವಿಧಾನಸಭೆ ಚುನಾವಣೆ ಟಿಕೆಟ್ ಗಾಗಿ ಸಿದ್ದು-ಡಿಕೆಶಿ ಬೆಂಬಲಿಗರ ಪೈಪೋಟಿ: ಮಾಗಡಿ, ತುಮಕೂರಿನಲ್ಲಿ ಜಟಾಪಟಿ!
ಮಾಗಡಿಯಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹೆಚ್.ಸಿ.ಬಾಲಕೃಷ್ಣ ಅವರಿಗೆ ಯಾವುದೇ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ನಿರಾಸೆಗೊಂಡಿದ್ದು, ಶಿವಕುಮಾರ್ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಸೇರಿದ್ದಾರೆ.
Published: 22nd May 2022 10:16 AM | Last Updated: 23rd May 2022 01:23 PM | A+A A-

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್
ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಿಗರು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.
ಮಾಗಡಿಯಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹೆಚ್.ಸಿ.ಬಾಲಕೃಷ್ಣ ಅವರಿಗೆ ಯಾವುದೇ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ನಿರಾಸೆಗೊಂಡಿದ್ದು, ಶಿವಕುಮಾರ್ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಸೇರಿದ್ದಾರೆ.
ಆದರೆ ಇದೀಗ ಮಾಜಿ ಸಚಿವ -ಕುರುಬ ಮುಖಂಡ ಹಾಗೂ ಸಿದ್ದರಾಮಯ್ಯ ಸಲಹೆಗಾರರಾಗಿರುವ ಹೆಚ್ ಎಂ ರೇವಣ್ಣ ಮಾಗಡಿಯಿಂದ ಸ್ಪರ್ಧಿಸಲು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ, ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಚ್.ಸಿ ಬಾಲಕೃಷ್ಣ ಶಿವಕುಮಾರ್ ಅವರಿಗೆ ರೇವಣ್ಣ ವಿರುದ್ಧ ಪತ್ರ ಬರೆದಿದ್ದಾರೆ.
ರೇವಣ್ಣ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಆಪ್ತರಾಗಿರುವ ಜೆಡಿಎಸ್ ಶಾಸಕ ಎ ಮಂಜುನಾಥ್ ಅವರನ್ನು ಬಹಿರಂಗವಾಗಿ ಹೊಗಳಿರುವುದು ಬಾಲಕೃಷ್ಣ ಅವರನ್ನು ಕೆರಳಿಸಿದೆ.
ಇದನ್ನೂ ಓದಿ: ರಾಮನಗರ: ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾಯ್ತಾ ಜಟಾಪಟಿ? ಡಿಕೆಶಿಗೆ ಬಾಲಕೃಷ್ಣ ಪತ್ರ!
2023ರ ವಿಧಾನಸಭೆ ಉಪಚುನಾವಣೆಯಲ್ಲಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಬಾಲಕೃಷ್ಣ ಶಿವಕುಮಾರ್ ಅವರಿಗೆ ವ್ಯಂಗ್ಯವಾಗಿ ಪತ್ರ ಬರೆದಿದ್ದಾರೆ. 2018 ರ ಉಪಚುನಾವಣೆಯಲ್ಲಿ ಮಾಗಡಿ ಮತ್ತು ಚನ್ನಪಟ್ಟಣ ಚುನಾವಣೆಯಲ್ಲಿ ಸೋತಿದ್ದ ರೇವಣ್ಣ ಈಗ ಮಾಗಡಿಗೆ ಮರಳಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಬಾಲಕೃಷ್ಣ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾದ ಮಾಜಿ ಸಚಿವ ಸಂತೋಷ್ ಲಾಡ್ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಗುರುತಿಸಿಕೊಂಡಿರುವ ಮಾಜಿ ಎಂಎಲ್ ಸಿ ನಾಗರಾಜ್ ಚೆಬ್ಬಿ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಸಂತೋಷ್ ಲಾಡ್ ಕೆಲ ದಿನಗಳಿಂದ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಲ್ಲದ ಕಾರಣ ಶಿವಕುಮಾರ್ ಬೆಂಬಲದೊಂದಿಗೆ ಚೆಬ್ಬಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಸಂತೋಷ್ ಲಾಡ್ ಅವರಿಗೆ ಹೊಸಪೇಟೆ ಕ್ಷೇತ್ರದ ಟಿಕೆಟ್ ನೀಡುವುದಾಗಿ ಮೂಲಗಳು ತಿಳಿಸಿವೆ.
ತುಮಕೂರು ಜಿಲ್ಲೆಯ ಸಿರಾ, ತಿಪಟೂರು, ತುಮಕೂರು ನಗರದಲ್ಲಿಯೂ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿರುವ ಟಿಕೆಟ್ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದವರು ಜೆಡಿಎಸ್ ಸೇರಬಹುದು ಎಂದು ಮೂಲಗಳು ತಿಳಿಸಿವೆ. ಕೆಲವರಿಗೆ ಪಕ್ಷದ ಟಿಕೆಟ್ ಸಿಗದೇ ಭ್ರಮನಿರಸನಗೊಂಡಿರುವ ನಾಯಕರನ್ನು ಪಕ್ಷದ ಹೈಕಮಾಂಡ್ ಯಾವ ರೀತಿ ಸಮಾಧಾನಪಡಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.