ಸಿದ್ದರಾಮಯ್ಯ ಪಾಲ್ಗೊಂಡ ಕಾರ್ಯಕ್ರಮಗಳಲ್ಲಿ ಪರಮೇಶ್ವರ್ ಗೈರು: ರಾಜ್ಯ ರಾಜಕೀಯದಲ್ಲಿ ಚರ್ಚೆ ಶುರು!
ತುಮಕೂರಿನಲ್ಲಿ ನಡೆದ ಮಡಿವಾಳ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಸಮಾವೇಶಕ್ಕೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಗೈರು ಹಾಜರಾಗಿದ್ದು, ಈ ಬೆಳವಣಿಗೆಯು ಕಾಂಗ್ರೆಸ್ ಒಳಜಗಳ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗುವಂತೆ ಮಾಡಿದೆ.
Published: 23rd May 2022 10:34 AM | Last Updated: 23rd May 2022 01:15 PM | A+A A-

ತುಮಕೂರಿನಲ್ಲಿ ಭಾನುವಾರ ನಡೆದ ಮಡಿವಾಳ ಸಮುದಾಯದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿರುವುದು.
ತುಮಕೂರು: ತುಮಕೂರಿನಲ್ಲಿ ನಡೆದ ಮಡಿವಾಳ ಸಮಾವೇಶ ಹಾಗೂ ಅಲ್ಪಸಂಖ್ಯಾತರ ಸಮಾವೇಶಕ್ಕೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಗೈರು ಹಾಜರಾಗಿದ್ದು, ಈ ಬೆಳವಣಿಗೆಯು ಕಾಂಗ್ರೆಸ್ ಒಳಜಗಳ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗುವಂತೆ ಮಾಡಿದೆ.
ತಮ್ಮ ಮಾಲಿಕತ್ವದ ಸಿದ್ದಾರ್ಥ ಮೆಡಿಕಲ್ ಕಾಲೇಜು ಪಕ್ಕದಲ್ಲೇ ಮಡಿವಾಳ ಸಮಾವೇಶ ನಡೆದರೂ ಕೂಡ ಪರಮೇಶ್ವರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದ ಎರಡೂ ಕಾರ್ಯಕ್ರಮಕ್ಕೆ ಪರಮೇಶ್ವರ್ ಗೈರು ಹಾಜರಾಗಿರುವುದು, ಚರ್ಚೆಗೆ ಗ್ರಾಸವಾಗಿದೆ.
ಆಮಂತ್ರಣ ಪತ್ರಿಕೆಯಲ್ಲಿ ಪರಮೇಶ್ವರ್ ಅವರ ಹೆಸರು ಮುದ್ರಿತವಾಗಿದ್ದು, ಎರಡೂ ಕಾರ್ಯಕ್ರಮದ ಆಯೋಜಕರು ಖುದ್ದಾಗಿ ಪರಮೇಶ್ವರ್ ಅವರನ್ನು ಆಹ್ವಾನಿಸಿದ್ದರೂ ಕೂಡ ಕಾರ್ಯಕ್ರಮಕ್ಕೆ ಬಾರದೇ ಇರುವುದು ಎದ್ದು ಕಾಣುತ್ತಿತ್ತು.
ಕಾರ್ಯಕ್ರಮಕ್ಕೆ ಪರಮೇಶ್ವರ್ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಗೆಸ್ಟ್ಹೌಸ್ನಲ್ಲಿ ಮೊದಲು ಯೋಜಿಸಲಾಗಿದ್ದ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ರದ್ದುಪಡಿಸಿ, ರಾಜಣ್ಣ ಅವರ ನಿವಾಸದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್ ಅವರು ಉದ್ದೇಶ ಪೂರ್ವಕವಾಗಿಯೇ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ: ಸೋಮವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ಸಿದ್ದರಾಮಯ್ಯನವರ ಕಟ್ಟಾ ಅಭಿಮಾನಿ, ಶಿರಾ ಮಾಜಿ ಶಾಸಕ ಸಾ.ಲಿಂಗಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಅಹಿಂದ ಚಿಂತಕರ ವೇದಿಕೆ ಸಂಜೆ ವೇಳೆ ಆಯೋಜಿಸಿದ್ದ 2013 ರಿಂದ 2018 ರವರೆಗಿನ ಐದು ವರ್ಷಗಳ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಎಂಬ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಸಮುದಾಯದ ಮುಖಂಡರು ಹಾರೈಸಿದರು. ಇದೇ ವೇಲೆ ಮಧುಗಿರಿಯ ದಲಿತ ದಂಪತಿಗಳು ತಮ್ಮ ನವಜಾತ ಶಿಶುವಿಗೆ ‘ಸಿದ್ದರಾಮಯ್ಯ’ ಎಂದು ನಾಮಕರಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಡಿವಾಳ ಸಮುದಾಯವನ್ನು ಎಸ್ಸಿ ಮೀಸಲಾತಿಗೆ ಸೇರಿಸುವ ಬೇಡಿಕೆ ಇದೆ. ಮಡಿವಾಳರನ್ನು ಎಸ್ಸಿ ಮೀಸಲಾತಿಗೆ ಸೇರಿಸುವ ಬೇಡಿಕೆ ವಿಚಾರವಾಗಿ ಅನ್ನಪೂರ್ಣ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ನಮ್ಮ ಸರ್ಕಾರ ಬಂದಾಗ ವರದಿ ಶಿಫಾರಸಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆ ಟಿಕೆಟ್ ಗಾಗಿ ಸಿದ್ದು-ಡಿಕೆಶಿ ಬೆಂಬಲಿಗರ ಪೈಪೋಟಿ: ಮಾಗಡಿ-ತುಮಕೂರಿನಲ್ಲಿ ಜಟಾಪಟಿ!
ಮಡಿವಾಳ ಸಮಾಜ ಅತ್ಯಂತ ಹಿಂದುಳಿದ ಸಮಾಜ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಮಾವೇಶ ಏರ್ಪಡಿಸಿರುವುದು ಸಾಹಸ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನ ಗುರುತಿಸಿ ಶಕ್ತಿ ತುಂಬುವ ಕೆಲಸ ಸರ್ಕಾರದ್ದಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದಿಂದ ವಂಚಿತರಾದ ಜಾತಿಗಳಿಗೆ ನ್ಯಾಯ ದೊರಕಿಸಿ ಕೊಡೋ ಕೆಲಸ ಮಾಡುತ್ತೇವೆ. ಅಸಮಾನತೆಗೆ ಹಿಂದುಳಿದ ಜಾತಿಗಳು ಕಾರಣ ಅಲ್ಲ. ಬದಲಾಗಿ ಸಾಮಾಜಿಕ ವ್ಯವಸ್ಥೆಯೇ ಕಾರಣ. ಶೂದ್ರ ಸಮುದಾಯ ಹಾಗೂ ಪಂಚಮ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಸಂವಿಧಾನದಲ್ಲಿ ಸಮಸಮಾಜದ ನಿರ್ಮಾಣ ಮಾಡಲು ಹೇಳಲಾಗಿದೆ. ಆದರೆ, ಸಮುದಾಯದ ಏಳಿಗೆಗೆ ಒತ್ತಾಯ, ಹೋರಾಟ ಮಾಡಲೇಬೇಕಿದೆ ಎಂದು ತಿಳಿಸಿದರು.