ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಸಮಾಧಾನ: ಕಾಂಗ್ರೆಸ್ ನಾಯಕಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್!
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ಕವಿತಾ ರೆಡ್ಡಿ ವಿರುದ್ಧ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
Published: 28th May 2022 09:42 AM | Last Updated: 28th May 2022 01:23 PM | A+A A-

ಕವಿತಾ ರೆಡ್ಡಿ
ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ಕವಿತಾ ರೆಡ್ಡಿ ವಿರುದ್ಧ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷರಾಗಿರುವ ಕೆ.ರೆಹಮಾನ್ ಖಾನ್ ಅವರು ಈ ನೋಟಿಸ್ ಜಾರಿ ಮಾಡಿದ್ದಾರೆ. ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕವಿತಾ ರೆಡ್ಡಿ ಮಾಧ್ಯಮಗಳ ಮುಂದೆ ಅಸಮಾಧಾನವನ್ನು ಹೊರ ಹಾಕಿದ್ದರು. ಈ ವಿಚಾರವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದರಿಂದ ಪಕ್ಷದ ಘನತೆ ಗೌರವಗಳಿಗೆ ಕುಂದುಂಟಾಗಿದೆ. ನಿಮ್ಮ ಈ ನಡುವಳಿಕೆಯಿಂದ ಪಕ್ಷದ ಶಿಸ್ತು ಉಲ್ಲಂಘನೆಯಾಗಿದ್ದು, ಪಕ್ಷಕ್ಕೆ ಮುಜುಗುರ ಉಂಟಾಗಿದೆ ಎಂದು ಕೆಪಿಸಿಸಿ ಡಿಎಸಿ ಸ್ಪಷ್ಟ ಮಾಹಿತಿ ನೀಡುವಂತೆ ಕವಿತಾ ರೆಡ್ಡಿ ಅವರಿಗೆ ನೋಟಿಸ್ ನೀಡಿದೆ.
ಈ ಬಗ್ಗೆ ಸಮಂಜಸ ಉತ್ತರವನ್ನು ಸಲ್ಲಿಸುವಂತೆ ಹಾಗೂ 7 ದಿನದೊಳಗೆ ಉತ್ತರ ನೀಡದಿದ್ದರೆ ಮುಂದಿನ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಕವಿತಾ ರೆಡ್ಡಿ ಅವರಿಗೆ ಸೂಚಿಸಲಾಗಿದೆ.