ಕೆಡಿಪಿ ಸಭೆಯಲ್ಲೇ ಎಚ್‌ಡಿ ರೇವಣ್ಣ - ಪ್ರೀತಂ ಗೌಡ ನಡುವೆ ಜಟಾಪಟಿ

ಕೊನೆಗೂ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹಾಗೂ ಹಾಸನ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರ ನಡುವಿನ ಶೀತಲ ಸಮರ ಬುಧವಾರ ಸ್ಫೋಟಗೊಂಡಿದೆ.
ಎಚ್ ಡಿ ರೇವಣ್ಣ
ಎಚ್ ಡಿ ರೇವಣ್ಣ

ಹಾಸನ: ಕೊನೆಗೂ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹಾಗೂ ಹಾಸನ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರ ನಡುವಿನ ಶೀತಲ ಸಮರ ಬುಧವಾರ ಸ್ಫೋಟಗೊಂಡಿದೆ.

ಇಂದು ನಡೆದ ಕೆಡಿಪಿ ಸಭೆಯಲ್ಲಿ ಹಾಸನದ ಹೊಸ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಚನ್ನಪಟ್ಟಣ ಟ್ಯಾಂಕ್‌ ಅಭಿವೃದ್ಧಿ ವಿಚಾರವಾಗಿ ಎಚ್‌ಡಿ ರೇವಣ್ಣ ಹಾಗೂ ಬಿಜೆಪಿ ಶಾಸಕ ಪ್ರೀತಂ ಗೌಡ ನಡುವೆ ತೀವ್ರ ಜಟಾಪಟಿ ನಡೆಯಿತು.

ಅಚ್ಚರಿ ಎಂದರೆ, ಈ ವೇಳೆ ಮಾಜಿ ಸಚಿವ ಮತ್ತು ಜೆಡಿಎಸ್ ನಾಯಕ ಎಚ್‌ಕೆ ಕುಮಾರಸ್ವಾಮಿ, ಶಾಸಕರಾದ ಕೆಎಸ್ ಲಿಂಗೇಶ್ ಮತ್ತು ಕೆಎಂ ಶಿವಲಿಂಗೇಗೌಡ ಅವರು ಎಚ್‌ಡಿ ರೇವಣ್ಣ ಅವರನ್ನು ಬೆಂಬಲಿಸಲಿಲ್ಲ.

ಸುಮಾರು ಹದಿನೈದು ನಿಮಿಷಗಳ ಕಾಲ ನಾಯಕರ ನಡುವೆ ಮಾತಿನ ಚಕಮಕಿ ಮುಂದುವರಿಯಿತು. ಉಭಯ ನಾಯಕರು ಏಕವಚನದಲ್ಲೇ ವಾಗ್ವಾದ ನಡೆಸಿದರು. ಮೊದಲಿಗೆ ಎಚ್.ಡಿ.ರೇವಣ್ಣ ಅವರು ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 144 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೆ ಚನ್ನಪಟ್ಟಣ ಕೆರೆ ಅಭಿವೃದ್ಧಿಯ ಮೂಲ ಯೋಜನೆಯನ್ನು ಬದಲಿಸಿದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಟೀಕಿಸಿದರು.

ಪ್ರೀತಂ ಗೌಡ ಮಾತನಾಡಿ, ಕೆಡಿಪಿ ಸಭೆಯಲ್ಲಿ ಸಚಿವ ಸಂಪುಟದ ನಿರ್ಣಯವನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು. ಆದರೆ ಚನ್ನಪಟ್ಟಣ ಕೆರೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ಸಂಪುಟ ನಿರ್ಣಯ ವಿರೋಧಿಸಿ ನಿರ್ಣಯ ಅಂಗೀಕರಿಸುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಅಲ್ಲದೆ ಹಾಸನ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೊಡುಗೆ ಏನು? ಎಂದು ಎಚ್‌ಡಿ ರೇವಣ್ಣ ಪ್ರಶ್ನಿಸಿದಾಗ ಪರಿಸ್ಥಿತಿ ಹದಗೆಟ್ಟಿತು.

ಈ ವೇಳೆ ಹಲವು ವರ್ಷಗಳಿಂದ ಸಚಿವ, ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಅನುಭವಿಸುತ್ತಿದ್ದರೂ ಜಿಲ್ಲೆಯ ಅಭಿವೃದ್ಧಿ ಮಾಡುವಲ್ಲಿ ಜೆಡಿಎಸ್ ನಾಯಕರು ವಿಫಲರಾಗಿದ್ದಾರೆ ಎಂದು ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದರು. 

ತಾವು ಪ್ರತಿನಿಧಿಸುವ ಹಾಸನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆಗಾಗ್ಗೆ ಅಡ್ಡಿಪಡಿಸುವ ಬದಲು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಎಚ್‌ಡಿ ರೇವಣ್ಣ ಅವರಿಗೆ ಪ್ರೀತಂ ಗೌಡ ಸವಾಲು ಹಾಕಿದರು. ಈ ಕುರಿತು ಪ್ರತ್ಯೇಕವಾಗಿ ಚರ್ಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆಗಾಗ್ಗೆ ಹೇಳುತ್ತಿದ್ದರೂ ಮುಖಂಡರು ಮಾತ್ರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com