ಕಾರ್ಯಕರ್ತರ ಕೆರಳಿಸುವ ಪ್ರಯತ್ನ ಬೇಡ, ಧಮ್‌, ತಾಕತ್ತು ಎದುರಿಸಲು ಸಿದ್ಧ: ಎಚ್‌ಡಿ ಕುಮಾರಸ್ವಾಮಿ

ಕಾರ್ಯಕರ್ತರ ಕೆರಳಿಸುವ ಪ್ರಯತ್ನ ಬೇಡ, ಧಮ್‌, ತಾಕತ್ತು ಎದುರಿಸಲು ತಾವು ಸಿದ್ಧ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ನಾಮಿ
ಕುಮಾರಸ್ನಾಮಿ

ಬೆಂಗಳೂರು: ಕಾರ್ಯಕರ್ತರ ಕೆರಳಿಸುವ ಪ್ರಯತ್ನ ಬೇಡ, ಧಮ್‌, ತಾಕತ್ತು ಎದುರಿಸಲು ತಾವು ಸಿದ್ಧ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿರುವ ಕುರಿತು ಪಕ್ಷದ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಪ್ರೀತಿ, ವಿಶ್ವಾಸ, ಕಾನೂನಿಗೆ ತಲೆ ಬಾಗುತ್ತೇನೆ. ಧಮ್‌, ತಾಕತ್ತು ತೋರಿಸಲು ಬಂದರೆ ಅದನ್ನು ಎದುರಿಸುವುದಕ್ಕೂ ಸಿದ್ಧ. ಹಿಂದಿನ ಮುಖ್ಯಮಂತ್ರಿಯೊಬ್ಬರು ಎಚ್‌.ಡಿ. ದೇವೇಗೌಡರ ಕುಟುಂಬವನ್ನು ಕೆಣಕಿ ಏನಾದರು ಎಂಬುದನ್ನು ಒಮ್ಮೆ ನೆನಪು ಮಾಡಿಕೊಂಡರೆ ಉತ್ತಮ. ಯಾವುದೇ ಕಾರಣಕ್ಕೂ ನನ್ನ ಪಕ್ಷದ ಕಾರ್ಯಕರ್ತರನ್ನು ಕೆರಳಿಸುವ ಪ್ರಯತ್ನ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

‘ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ಮುಗಿಸಲು ಕಾಂಗ್ರೆಸ್‌, ಬಿಜೆಪಿ ಒಂದಾಗಿದ್ದವು. ಈಗ ರಾಮನಗರದಲ್ಲಿ ಒಬ್ಬರನ್ನು ತಯಾರು ಮಾಡಿ ಬಿಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನನ್ನನ್ನು ಕಟ್ಟಿಹಾಬೇಕೆಂಬ ಉದ್ದೇಶದಿಂದ ಮತ್ತೆ ಎರಡೂ ಪಕ್ಷಗಳು ಒಂದಾಗಿರುವುದು ಗೊತ್ತಿದೆ. ನಾನು ಅಲ್ಲಿಯ ಮನೆಯ ಮಗ, ನನಗೆ ಏನು ಮಾಡುವುದಕ್ಕೂ ಅವರಿಗೆ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

‘ಹಣ ಯಾರ ಕಿಸೆಗೆ ಹೋಗುತ್ತದೆ?’
ಸಿ.ಪಿ. ಯೋಗೇಶ್ವರ್‌ ಕಲಾವಿದರ ಕೋಟಾದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಅವರ ಕೋರಿಕೆ ಆಧರಿಸಿ 50 ಕೋಟಿ ರೂ ಅನುದಾನ ಬಿಡುಗಡೆ ಮಾಡುವುದು ಎಂದರೆ ಏನರ್ಥ? ಈ ಹಣ ಯಾರ ಕಿಸಿಗೆ ಹೋಗಲಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. 'ಎಲ್ಲ ಕಾಮಗಾರಿಗಳ ಭೂಮಿ ಪೂಜೆಗೂ ತಾವೇ ಬರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಈಗ ಏಕೆ ಬರಲಿಲ್ಲ? ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ವಿಷಯ ತಿಳಿದಿರಲಿಲ್ಲವೆ? ಜನರನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಸಬೇಕಿತ್ತು. ಸಾವಿರಾರು ಮಂದಿ ಪೊಲೀಸರನ್ನು ನಿಯೋಜಿಸಿಕೊಂಡು ಭೂಮಿಪೂಜೆ ನೆರವೇರಿಸುವ ಅಗತ್ಯ ಏನಿತ್ತು. ಚನ್ನಪಟ್ಟಣದಲ್ಲಿ ಈ ರೀತಿಯ ದೌರ್ಜನ್ಯಕ್ಕೆ ನಾನು ಹೆದರುವುದಿಲ್ಲ. ಭೂಮಿ ಪೂಜೆಗೆ ಜಿಲ್ಲಾ ಉಸ್ತುವಾರಿ ಸಚಿವರು ಏಕೆ ಹೋಗಿಲ್ಲ?. ವಿಧಾನಪರಿಷತ್‌ನ ನಾಲ್ಕು ಚೇಲಾಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೀರಾ? ಕಾನೂನು ಉಲ್ಲಂಘನೆ ಮಾಡಿರುವವರನ್ನು ಬಂಧಿಸಬೇಕು. ಆದರೆ, ಧರಣಿ ಮಾಡುವವರನ್ನು ಬಂಧಿಸುತ್ತೀರಾ’ ಎಂದು ಎಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಬ್ಲ್ಯಾಕ್‌ಮೇಲ್‌ ಗೊತ್ತಿಲ್ಲ:
‘ನನ್ನ ಬಣ್ಣವೇ ಬ್ಲ್ಯಾಕ್‌ (ಕಪ್ಪು). ನನಗೆ ಬ್ಲ್ಯಾಕ್‌ ಮೇಲ್‌ ಎಂಬುದು ಗೊತ್ತಿಲ್ಲ. ನಾನೇಕೆ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಲಿ. ಸ್ಥಳೀಯ ಶಾಸಕನಾದ ನನಗೆ ಮಾಹಿತಿ ನೀಡದೆ ಕಾಮಗಾರಿಗಳ ಭೂಮಿಪೂಜೆ ನೆರವೇರಿಸುವ ಮೂಲಕ ವಿಧಾನ ಪರಿಷತ್‌ ಸದಸ್ಯರು ಮತ್ತು ಅಧಿಕಾರಿಗಳು ಶಾಸಕರ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಜಿಲ್ಲಾಧಿಕಾರಿಯವರ ಜತೆ ಮಾತನಾಡಿದ್ದೇನೆ. ಈ ಕುರಿತು ತಮಗೆ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಹಕ್ಕುಚ್ಯುತಿ ಎಸಗಿರುವ ಅಧಿಕಾರಿಗಳು ಮತ್ತು ವಿಧಾನ ಪರಿಷತ್‌ ಸದಸ್ಯರ ವಿರುದ್ಧ ವಿಧಾನಸಭೆ ಅಧ್ಯಕ್ಷರಿಗೆ ದೂರು ನೀಡುವೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈಗಾಗಲೇ ದೂರು ನೀಡಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com