ಅಕ್ಟೋಬರ್ 11 ರಿಂದ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ಕರ್ನಾಟಕ ಪ್ರವಾಸ ಆರಂಭ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಕ್ಟೋಬರ್ 11 ರಂದು ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಿಂದ ರಾಜ್ಯಾದ್ಯಂತ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ.
ಬಸವರಾಜ ಬೊಮ್ಮಾಯಿ - ಬಿಎಸ್ ಯಡಿಯೂರಪ್ಪ
ಬಸವರಾಜ ಬೊಮ್ಮಾಯಿ - ಬಿಎಸ್ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಕ್ಟೋಬರ್ 11 ರಂದು ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಿಂದ ರಾಜ್ಯಾದ್ಯಂತ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕೂಡ ಮುಂದಿನ ವಾರ ಮಧ್ಯ ಕರ್ನಾಟಕ ಪ್ರದೇಶದಲ್ಲಿ ಸಂಚರಿಸಲಿದೆ.

ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಮುಂದಿನ ಮೂರು ತಿಂಗಳಲ್ಲಿ 50 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, 2023ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಪ್ರಚಾರ ಆರಂಭಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ಎರಡು ತಂಡಗಳು ರಾಜ್ಯ ಪ್ರವಾಸವನ್ನು ಮುಂದುವರಿಸಲಿವೆ. ಒಟ್ಟಾರೆಯಾಗಿ, ಡಿಸೆಂಬರ್ ಅಂತ್ಯದ ವೇಳೆಗೆ 165 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳಲು ಪಕ್ಷದ ನಾಯಕರು ಯೋಜಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, 'ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ, ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲಿದ್ದಾರೆ ಮತ್ತು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಾರೆ. ಪಕ್ಷದ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಉಭಯ ನಾಯಕರು ಅಕ್ಟೋಬರ್ 11ರಿಂದ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಇರಲಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡುವುದರೊಂದಿಗೆ, ವಿವಿಧ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಹಲವು ಸಮಾವೇಶಗಳನ್ನು ನಡೆಸುತ್ತಿದೆ. ಪಕ್ಷವು ಅಕ್ಟೋಬರ್ 30 ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಮತ್ತು ನವೆಂಬರ್‌ನಸ್ಸಿ ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶವನ್ನು ಆಯೋಜಿಸಲಿದೆ. ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿ ಎಸ್‌ಸಿ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ ಮತ್ತು ಮಂಗಳೂರಿನಲ್ಲಿ ಯುವಮೋರ್ಚಾ ಸಮಾವೇಶ ನಡೆಸಲಿದೆ.

ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಮಂಡಳಿಗಳು ಮತ್ತು ನಿಗಮಗಳ ನೇಮಕಾತಿಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಮತ್ತು ಪಕ್ಷದ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದ ತಕ್ಷಣ ಸಚಿವ ಸಂಪುಟ ವಿಸ್ತರಣೆಗೆ ಬೊಮ್ಮಾಯಿ ಮುಂದಾಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಈಮಧ್ಯೆ, ಶುಕ್ರವಾರ ನಡೆಯಲಿರುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮಾರ್ಗಸೂಚಿಯ ಬಗ್ಗೆ ಚರ್ಚಿಸಲಾಗುವುದು ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು. ಕರ್ನಾಟಕದ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಈ ಯಾತ್ರೆಯು ವಿಫಲವಾಗಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com