ಕರ್ನಾಟಕವನ್ನು ಹೈಕಮಾಂಡ್ ಗೆ ಕಪ್ಪಕಾಣಿಕೆ ಕೊಡುವ 'ಎಟಿಎಂ' ಮಾಡಿಕೊಂಡು ಕಾಂಗ್ರೆಸ್ ನಿಂದ ಲೂಟಿ: ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಹಿಂದೆಯಿದ್ದ ಕಾಂಗ್ರೆಸ್ ಸರ್ಕಾರ ಆ ಪಕ್ಷದ ಹೈಕಮಾಂಡ್‌ಗೆ ‘ಎಟಿಎಂ’ (ಏನಿ ಟೈಮ್ ಮನಿ) ಆಗಿತ್ತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ
Published: 14th October 2022 10:56 AM | Last Updated: 14th October 2022 01:14 PM | A+A A-

ಬಸವರಾಜ ಬೊಮ್ಮಾಯಿ
ಬಳ್ಳಾರಿ: ರಾಜ್ಯದಲ್ಲಿ ಹಿಂದೆಯಿದ್ದ ಕಾಂಗ್ರೆಸ್ ಸರ್ಕಾರ ಆ ಪಕ್ಷದ ಹೈಕಮಾಂಡ್‌ಗೆ ‘ಎಟಿಎಂ’ (ಏನಿ ಟೈಮ್ ಮನಿ) ಆಗಿತ್ತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಲೂಟಿ ಮಾಡಿದ ಹಣವನ್ನು ಸೂಟ್‌ಕೇಸ್‌ಗಳಲ್ಲಿ ತುಂಬಿ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪು ಕಾಣಿಕೆ ರೂಪದಲ್ಲಿ ಕೊಡುತ್ತಿತ್ತು. ಕರ್ನಾಟಕ ವನ್ನು ಎಟಿಎಂ ಮಾಡಿಕೊಂಡಿದ್ದ ಇವರಲ್ಲಿ ಪಾಪ ಡಿ.ಕೆ. ಶಿವಕುಮಾರ ನಿಮಗೆ ಕಪ್ಪ ಕಾಣಿಕೆ ಕೊಟ್ಟು ಇವತ್ತು ವಿಚಾರಣೆಗೆ ಹೋಗುತ್ತಿದ್ದಾರೆ ಎಂದು ಮೂದಲಿಸಿದರು. ಐದು ವರ್ಷದ ಸರ್ಕಾರದ ಅವಧಿಯಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದೀರಿ. ನಿಮ್ಮ ಭ್ರಷ್ಟಾಚಾರದಿಂದಲೇ ಕರ್ನಾಟಕಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಹೈಕಮಾಂಡ್‌ಗೆ ಕಪ್ಪು ಕಾಣಿಕೆ ಕೊಡುವ ಸಂಸ್ಕೃತಿ ಆರಂಭಿಸಿದ ಕಾಂಗ್ರೆಸ್‌ನವರು ಈಗ ನಮ್ಮ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನ ಜಾಗೃತರಾಗಿದ್ದಾರೆ. ಹಳೆಯ ನಾಟಕ, ಮೋಸದ ವಿಚಾರ, ಕಾರ್ಯಕ್ರಮಗಳು ರಾಜ್ಯದಲ್ಲಿ ನಡೆಯುವುದಿಲ್ಲ. ನುಡಿದಂತೆ ನಡೆಯುವವರಿಗೆ ಕಾಲವಿದು. ಅನ್ನಭಾಗ್ಯದಲ್ಲಿ ಕನ್ನ ಹಾಕಿದವರು, ಬೋರ್‌ವೆಲ್‌ಗಳು, ನೀರಾವರಿ ಯೋಜನೆ, ಹಾಸ್ಟೆಲ್‌ಗಳ ದಿಂಬು ಹಾಸಿಗೆಯಲ್ಲಿ ಹಣ ಹೊಡೆದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದರೆ ಅದು ಕಾಂಗ್ರೆಸ್ ಭ್ರಷ್ಟಾಚಾರದಿಂದ ಎಂದು ಆರೋಪಿಸಿದರು.
ಇದನ್ನೂ ಓದಿ: ಗಣಿ ಜಿಲ್ಲೆಯತ್ತ ಹೊರಟ 'ಕೈ' ಪಡೆ: ಭಾರತ್ ಜೋಡೋ ಯಾತ್ರೆ ಸ್ವಾಗತಿಸಲು ಬಳ್ಳಾರಿ ಕಾಂಗ್ರೆಸ್ ಸಜ್ಜು
ಬಳ್ಳಾರಿಗೆ ‘ಭಾರತ್ ಜೋಡೋ’ ಯಾತ್ರೆ ಬರುತ್ತಿದೆ. ಸೋನಿಯಾ ಗಾಂಧಿ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸುವುದರ ಮೂಲಕ ಜಿಲ್ಲೆಯ ಜನ ಅವರಿಗೆ ಬೆಂಬಲ, ಆಶ್ರಯ ನೀಡಿದ್ದರು. ಆದರೆ, ಅವರು ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಉತ್ತರ ಪ್ರದೇಶದ ರಾಯ್ ಬರೈಲಿಗೆ ಹಾರಿ ಹೋದರು. ಬಳ್ಳಾರಿ ತವರು ಮನೆಯೆಂದು ಹೇಳಿದ್ದ ಸೋನಿಯಾ ಅವರಿಂದ ಜನ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಈಗ ಸುಳ್ಳು ಭರವಸೆ ಕೊಡುತ್ತ ರಾಹುಲ್ ಗಾಂಧಿ ಬಳ್ಳಾರಿಗೆ ಬರುತ್ತಿದ್ದಾರೆ. ನಿಮ್ಮ ತಾಯಿ ಅವರನ್ನು ಇಲ್ಲಿನ ಜನ ಆರಿಸಿ ಕಳಿಸಿದಾಗ ಏನೂ ಮಾಡಲಿಲ್ಲ. ಈಗ ಜನ ಜಾಗೃತರಾಗಿದ್ದಾರೆ. ನಿಮ್ಮ ಸುಳ್ಳು, ಮೋಸದ ಮಾತುಗಳನ್ನು ನಂಬುವುದಿಲ್ಲ ಎಂಬ ಸಂದೇಶವನ್ನು ಜಿಲ್ಲೆಯ ಜನ ಅವರಿಗೆ ಕೊಡಬೇಕು ಎಂದು ಹೇಳಿದರು. ಅಮ್ಮ ಅಯ್ತು ಇದೀಗ ಮಗ ಮತ್ತೊಂದು ಸುಳ್ಳು ಹೇಳಲು ಬರುತ್ತಿದ್ದಾರೆ . ಯಾವ ಮುಖ ಇಟ್ಟುಕೊಂಡು ಬಳ್ಳಾರಿಗೆ ಬರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಹಿಂದಿನ ಚುನಾವಣೆಯಲ್ಲಿ ಆದ ತಪ್ಪಿನಿಂದ ಹೂವಿನಹಡಗಲಿ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿದೆ ಎಂದ ಬೊಮ್ಮಾಯಿ, ಯಾರೇ ಅಭ್ಯರ್ಥಿಯಾಗಿದ್ದರೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದರು.